ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಂಡಿದ್ದು, ಇದೀಗ ಚಿತ್ರರಂಗದಲ್ಲಿ ಅಷ್ಟೇ ಗುಣಮಟ್ಟದ ಸಿನಿಮಾಗಳನ್ನು ಮಾಡಬೇಕು ಅನ್ನೋದು ಪ್ರತಿಯೊಬ್ಬ ನಟ, ನಿರ್ದೇಶಕ ಹಾಗೂ ನಿರ್ಮಾಪಕನ ಕನಸು. ಅದರಂತೆ ಕನ್ನಡ ಅಲ್ಲದೇ ದಕ್ಷಿಣ ಭಾರತದಲ್ಲಿ ಬುದ್ಧಿವಂತ ನಿರ್ದೇಶಕ ಹಾಗೂ ನಟ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರು ಬರೋಬ್ಬರಿ 7 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಯುಐ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಉಪ್ಪಿ ಡೈರೆಕ್ಷನ್ ಅಂದ್ಮೇಲೆ ರೆಗ್ಯುಲರ್ ಸಿನಿಮಾ ನೋಡುವುದಕ್ಕೆ ಆಗುತ್ತಾ? ಉಪೇಂದ್ರ ಸಿನಿಮಾವನ್ನು ನೋಡುವ ರೀತಿಯೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಕೂಡ ಇದನ್ನು ಸಾಬೀತು ಮಾಡಿವೆ. ಈಗ ಯುಐ ಕೂಡ ಉಪೇಂದ್ರ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಇವೆ. ಅದಕ್ಕೆ ಸಾಕ್ಷಿ ಎಂಬಂತೆ ಟೀಸರ್ ಹಾಗೂ ಟ್ರೋಲ್ ಸಾಂಗ್ ರಿವೀಲ್ ಆಗಿವೆ
ಹೌದು, ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ ಯುಐ ಚಿತ್ರದ ಮೂಲಕ ಒಂದು ಮೆಸೇಜ್ ಹೇಳೋದಕ್ಕೆ ಹೊರಟ್ಟಿದ್ದಾರೆ. ಸದ್ಯ ಟ್ರೋಲ್ ಹಾಡಿನಿಂದ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಈ ಹಾಡಿನಲ್ಲಿ ಹೇಳುವ ಮೂಲಕ ಅವರ ಅಭಿಮಾನಿ ಬಳಗದಲ್ಲಿ ತಲೆಗೆಹುಳ ಬಿಟ್ಟಿದ್ದರು. ರಿಯಲ್ ಸ್ಟಾರ್ ಈ ಚಿತ್ರಕ್ಕಾಗಿ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆಗೂಡಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
“ಇದರ ಜೊತೆಗೆ ಉಪೇಂದ್ರ ಅವರು ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ತಂತ್ರಜ್ಞಾನ ಬಳಸಿದ್ದಾರೆ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿ ತೆಗೆದ ಏಪ್ಯಾದಲ್ಲಿಯೇ ಮೊದಲ ಸಿನಿಮಾ ಇದು ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕೆಮರಾನ್ ‘ಅವತಾರ್ 2’ ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ” ಅಂತಾರೆ.
“ಇದಕ್ಕಾಗಿ 10 ಕೋಟಿ ರೂ. ಖರ್ಚು ಮಾಡಲಾಗಿದೆ. ಅಮೆರಿಕದ ರೇಡಿಯನ್ಸ್ ಎಂಬ ವಿಎಫ್ಎಕ್ಸ್ ಕಂಪನಿ ನಮ್ಮ ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡುಗಳ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಯುರೋಪ್ನಲ್ಲಿ ಬೀಡು ಬಿಟ್ಟಿದ್ದಾರೆ. ಉಪೇಂದ್ರ ಅವರು ಯುಐ ಚಿತ್ರವನ್ನು ಬಹಳ ವಿಶೇಷವಾಗಿ ಪ್ರೆಸೆಂಟ್ ಮಾಡಬೇಕು ಎಂಬ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುರೋಪ್ನಲ್ಲಿ ಸೌಂಡ್ ಮಿಕ್ಸಿಂಗ್ ಕೆಲಸ ಮಾಡಿಸುತ್ತಿದ್ದಾರೆ” ಎಂದರು.