ಹುಬ್ಬಳ್ಳಿ: ಕಳೆದ ವರ್ಷ ರಾಜ್ಯ ಬರಗಾಲದಿಂದ ರಾಜ್ಯ ತತ್ತರಿಸಿತ್ತು. ಅದರಲ್ಲೂ ಜನರು ಮಳೆ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸಿದ್ದರು. ಆ ಪರಿಯ ಅನಾವೃಷ್ಟಿಯನ್ನು ಕಂಡಿದ್ದ ರಾಜ್ಯಕ್ಕೆ ಈಗ ಅತಿವೃಷ್ಟಿ ಕಾಡುತ್ತಿದೆ. ಇದರಿಂದ ಮನೆ ಕುಸಿತ, ಗುಡ್ಡ ಕುಸಿತದಂತಹ ಘಟನೆಗಳು ವರದಿಯಾಗುತ್ತಿವೆ. ಇನ್ನೂ ಕೆಲವೆಡೆ ಸರ್ಕಾರಿ ಕಚೇರಿಗಳು ಸಹ ಸೋರಲಾರಂಭಿಸಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್ ಕಚೇರಿ ಮೇಲಿರುವ ಸಭಾಂಗಣದ ಮೇಲ್ಛಾವಣಿ ಸೋರುತ್ತಿದೆ. ತೇಪೆ ಹಾಕುವ ರೀತಿಯಲ್ಲಿ ಪ್ಲಾಸ್ಟಿಕ್ ಹಾಳೆ ಹೊದಿಸಿದ್ದರೂ ಕೂಡ ಸೋರುವುದು ಮಾತ್ರ ನಿಂತಿಲ್ಲ!
ಈ ಕಟ್ಟಡ ಬ್ರಿಟಿಷ್ ಕಾಲದ ವಾಸ್ತು ಶೈಲಿಯನ್ನು ಹೊಂದಿದ್ದು, ಸಂಪೂರ್ಣ ಕಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಪುರಾತನ ಹಾಗೂ ಪಾರಂಪರಿಕ ಕಟ್ಟಡವೂ ಇದಾಗಿದ್ದರಿಂದ ಸತತ ಮಳೆಗೆ ಕಟ್ಟಿಗೆಗಳು ನೆನೆಯುವ ಭೀತಿ ಶುರುವಾಗಿದೆ. ಪಾಲಿಕೆಯ ಕಮಿಷನರ್, ವಲಯ ಆಯುಕ್ತರು, ಇಂಜಿನಿಯರ್ ಸೇರಿದಂತೆ ಎಲ್ಲರೂ ಇದೇ ಸಭಾಂಗಣದಲ್ಲಿ ಸಭೆಗಳನ್ನು ನಡೆಸುತ್ತಾರೆ. ಸದ್ಯ ಮಳೆಗೆ ಅಲ್ಲಲ್ಲಿ ಸೋರುತ್ತಿರುವುದರಿಂದ ಆತಂಕ ಶುರುವಾಗಿದೆ.
ಈ ಬಗ್ಗೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ್ ಪ್ರತಿಕ್ರಿಯೆ ನೀಡಿದ್ದು, ಕಟ್ಟಡ ಸೋರುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದೊಂದು ಅತ್ಯಂತ ಹಳೆಯ ಮತ್ತು ಐತಿಹಾಸಿಕ ಕಟ್ಟಡವಾಗಿದೆ. ಇದನ್ನು ಕಾಪಾಡುವದು ನಮ್ಮ ಜವಾಬ್ದಾರಿ. ರಿಪೇರಿ ಮಾಡಲು ಪಾಲಿಕೆ ಕಮಿಷನರ್ ಅವರಿಗೆ ತಿಳಿಸುವುದಾಗಿ ಹೇಳಿದ್ದಾರೆ.