ನವದೆಹಲಿ: ಇಂದು ಕಾರ್ಗಿಲ್ ವಿಜಯ್ ದಿವಸ್. ಭಾರತ ದೇಶ ಪಾಕಿಸ್ತಾನ ವಿರುದ್ಧದ ಭೀಕರ ಯುದ್ಧ ಜಯಿಸಿ ಇಂದಿಗೆ 25 ವರ್ಷ. ಈ ವಿಶೇಷ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾಶ್ಮೀರಕ್ಕೆ ಬೆಳಗ್ಗೆ 9.20ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ, ಎಂಐ- 17 ಹೆಲಿಕ್ಯಾಪ್ಟರ್ ಮೂಲಕ ದ್ರಾಸ್ಗೆ ಆಗಮಿಸಿದರು. ಕಾಶ್ಮೀರದ ತಾಂತ್ರಿಕ ಪ್ರದೇಶಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಅವರನ್ನು ಲೆ.ಗವರ್ನರ್ ಮನೋಜ್ ಸಿನ್ಹಾ, ಮುಖ್ಯ ಕಾರ್ಯದರ್ಶಿ ಅಟಲ್ ಡುಲ್ಲೊ ಮತ್ತು ಡಿಜಿಪಿ ಆರ್ಆರ್ ಸ್ವೈನ್ ಬರಮಾಡಿಕೊಂಡರು. ಜಮ್ಮು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಪಕ್ಷದ ಇತರ ಕೆಲವು ಹಿರಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದ್ರಾಸ್ನಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ ದಿನಸ್ನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾ ತಂಡಗಳನ್ನು ಉದ್ದೇಶಿಸಿ ಮಾತನಾಡಿದರು. ಲಡಾಖ್ ಲೆ.ಗವರ್ನರ್ ಬ್ರಿಗೇಡಿಯರ್ (ನಿವೃತ್ತ) ಬಿ.ಡಿ ಮಿಶ್ರಾ ಹಾಗೂ ಸೇನಾ ಮುಖ್ಯಸ್ಥರು ಮತ್ತು ಸೇನಾ ಹಿರಿಯ ಕಮಾಂಡರ್ಗಳು ಭಾಗಿಯಾಗಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ಮಹತ್ವ: 1999ರಲ್ಲಿ ಮೂರು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಭೂಸೇನೆ, ವಾಯುಸೇನೆಯೊಂದಿಗೆ ಪಾಕಿಸ್ತಾನವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈ ಭೀಕರ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ವೀರಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ