₹ 4.8 ಕೋಟಿ ಹಣ ಜಪ್ತಿ ಪ್ರಕರಣ – Chargesheet ರದ್ದತಿಗೆ ಸಂಸದ ಸುಧಾಕರ್ ಅರ್ಜಿ

ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ 4.8 ಕೋಟಿ ರೂ. ಹಣ ಪತ್ತೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾದ ಆರೋಪಪಟ್ಟಿ ರದ್ದುಪಡಿಸಲು ಕೋರಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಿಂದೆ ಸರಿದಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದವಾರ ಗೋವಿಂದಪ್ಪ ಎಂಬುವರ ಮನೆಯಲ್ಲಿ 4.8 ಕೋಟಿ ರೂಪಾಯಿ ಜಪ್ತಿ ಮಾಡಿದ್ದರು. ಈ ಪ್ರಕರಣ ಸಂಬಂಧ ಮಾದನಾಯಕಹಳ್ಳಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜೆಎಂಎಫ್​ಸಿ ಕೋರ್ಟ್​ನಲ್ಲಿ ಚಾರ್ಜ್​ಶೀಟ್​ ದಾಖಲಿಸಿದ್ದರು. ಈ ಆರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಡಾ. ಸುಧಾಕರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯ ಪೀಠದ ಮುಂದೆ ನಿಗದಿಯಾಗಿತ್ತು.

ಡಾ.ಸುಧಾಕರ್ ಪರ ವಕೀಲರು ಹಾಜರಾಗಿ, ನ್ಯಾಯ ಪೀಠದ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದರು. ಆಗ ನ್ಯಾಯಮೂರ್ತಿಗಳು, ‘ಈ ಅರ್ಜಿ ವಿಚಾರಣೆ ನನ್ನ ಮುಂದೆ ಬೇಡ’ ಎಂದು ಹೇಳಿ ವಿಚಾರಣೆಯಿಂದ ಹಿಂದೆ ಸರಿದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಬಿ. ವಿ. ಆಚಾರ್ಯ ಮತ್ತು ಬಿ.ಎಲ್. ಆಚಾರ್ಯ ಹಾಜರಾಗಿದ್ದರು.

ಪ್ರಕರಣದ ವಿವರ: ಲೋಕಸಭೆ ಚುನಾವಣೆಯ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದವಾರ ಗೋವಿಂದಪ್ಪನ ಮನೆಯಿಂದ 4.8 ಕೋಟಿ ರೂಪಾಯಿ ಹಣ ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಮತದಾರರಿಗೆ ಹಂಚುವ ಹಣ ಎಂದು ಹೇಳಲಾಗಿತ್ತು. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Leave a Reply

Your email address will not be published. Required fields are marked *