ದಾವಣಗೆರೆ: ಯಾರೋ ಹೋಗಿ ನಾಯಿ ಮಾಂಸ ತಂದಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂದು ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಿ ಮಾಂಸ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಂಸದ ವ್ಯಾಪಾರಿ ರಾಜಸ್ಥಾನದಿಂದ ಪ್ರತಿ ವಾರಕ್ಕೆ, 15 ದಿನಗಳಿಗೊಮ್ಮೆ ಅಥವಾ ಬೇಕಾದ ಸಂದರ್ಭದಲ್ಲಿ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಅನಾವಶ್ಯಕವಾಗಿ ಏನೇನೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಜುಲೈ 26ರಂದು ರಾಜಸ್ಥಾನದಿಂದ ಬೆಂಗಳೂರಿನ ಮಾಂಸದ ವ್ಯಾಪಾರಿ ರಜಾಕ್ ಎಂಬುವರು ರೈಲಿನ ಮೂಲಕ ತಂದ ಮಾಂಸದ ಬ್ಯಾಗನ್ನಲ್ಲಿ ನಾಯಿ ಮಾಂಸ ಕಲಬೆರಕೆ ಆಗಿದೆ ಎಂದು ಹಿಂದೂ ಸಂಘಟನೆಯ ಪುನೀತ್ ಕೆರೆಹಹಳ್ಳಿ ಆರೋಪಿಸಿ, ರೈಲು ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಆಗ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಕೆರೆಹಳ್ಳಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪಡೆದಿದ್ದರು. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು.