ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಘಟನೆ: ಈ ರೀತಿನೂ ಅಟ್ಯಾಕ್ ಮಾಡ್ತಾರಾ ದರೋಡೆಕೋರರು?

ಉಡುಪಿ : ಸಿನಿಮಾ ಕಥೆಯನ್ನು ಹೋಲುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ತೆಕ್ಕಟ್ಟೆ ಪರಿಸರದಲ್ಲಿ ನಡೆದಿದೆ.

ಕೋಟ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳ್ಳಂಬೆಳಗ್ಗೆ ನಕಲಿ ಐಟಿ ಅಧಿಕಾರಿಗಳು ಮತ್ತು ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕ ಸೃಷ್ಟಿಸಿದೆ.

ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡು ಇರುವ ಕವಿತಾ ಎನ್ನುವವರ ಮನೆಗೆ ಇದೆ ಜುಲೈ 25ರಂದು ಕಾರಿನಲ್ಲಿ ಐಟಿ ಅಧಿಕಾರಿಗಳಂತೆ ಒಂದು ತಂಡ ಬರುತ್ತಾರೆ. ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ ಕವಿತಾ ಮನೆಯ ಬಾಗಿಲನ್ನು ಭದ್ರ ಪಡಿಸಿದ ಕೆಲವೇ ಕ್ಷಣದಲ್ಲಿ ಒಂದು ಸ್ವಿಫ್ಟ್ ಹಾಗೂ ಇನ್ನೊವಾ ಕಾರ್ನಲ್ಲಿ ಒರ್ವ ಪೊಲೀಸ್ ಸಿಬ್ಬಂದಿ ವೇಷಧಾರಿಯೂ ಸೇರಿ, ಒಟ್ಟು ಎಂಟು ಜನರ ತಂಡ ಆಗಮನವಾಗುತ್ತದೆ.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕವಿತಾ ಅವರ ಕುಟುಂಬ ತೆಕಟ್ಟೆ ಪರಿಸರದಲ್ಲಿ ಸರ್ವಸಜ್ಜಿತ ಮನೆಯಲ್ಲಿ ವಾಸವಾಗಿದ್ದವರು. ಕಳೆದ ಕೆಲವು ದಿನಗಳಿಂದ ಇವರ ಮನೆಯ ಮುಂದೆ ಓಡಾಡಿ ಇದೇ ತಂಡ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು ಎನ್ನಲಾಗಿದೆ. ಮನೆಯ ಸುತ್ತ ಇರುವ ಸಿಸಿ ಕ್ಯಾಮೆರಾ ಮತ್ತು ಭದ್ರತೆಯನ್ನು ಗಮನಿಸಿ ಐಟಿ ವೇಷಧಾರಿಗಳ ರೂಪದಲ್ಲಿ ತಂಡ ಮನೆಗೆ ನುಗ್ಗುವ ಯತ್ನ ಮಾಡಿತ್ತು ಎನ್ನುವುದು ಸದ್ಯ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಕುಂದಾಪುರ ಮೂಲದ ಸೈನ್ ಇನ್ ಸಿಸಿ ಕ್ಯಾಮೆರಾ ಲೈವ್ ಸರ್ವೆಲೆನ್ಸ್ ಸಂಸ್ಥೆ ಕವಿತಾ ಅವರ ಮನೆ ಮುಂದೆ 8:30 ರ ಸುಮಾರಿಗೆ ಅಪರಿಚಿತರು ಎರಡು ಕಾರಿನಲ್ಲಿ ಬಂದಿರುವುದನ್ನು ಗಮನಿಸಿ ಸಕಾಲದಲ್ಲಿ ಎಚ್ಚರಿಸಿದ್ದಾರೆ. ಮನೆ ಹೆಂಡತಿ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಮನೆಯ ಪಕ್ಕದ ಗೇಟ್ ಹತ್ತಿ ಕಾಂಪೌಂಡ್ ಒಳಗೆ ಹಾರಿ ಬಂದ ತಂಡದವರು ಮನೆಯ ಸುತ್ತ ವೀಕ್ಷಿಸಿ ಮನೆಯ ಒಳ ಪ್ರವೇಶಿಸುವ ಪ್ರಯತ್ನವನ್ನು ಮಾಡಿದ್ದರು ಎನ್ನಲಾಗಿದೆ.

ಆದರೆ ಸಕಾಲದಲ್ಲಿ ಸಿಸಿ ಕ್ಯಾಮೆರಾ ಸಂಸ್ಥೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರು ಬಾಗಿಲನ್ನು ಭದ್ರಪಡಿಸಿಕೊಂಡಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಈ ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎರಡು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *