ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ನಗರದಲ್ಲಿ ‘ನೀಲಿ ಮಾರ್ಗ’ದ (Metro Blue Line) ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿದೆ. ಇದೀಗ ಈ ಮಾರ್ಗದಲ್ಲಿ ಅಚಾತುರ್ಯ ನಡೆದಿದ್ದು, ಇದು ಭಾರೀ ಜನದಟ್ಟಣೆಗೆ ಸಾಕ್ಷಿಯಾಗಿದೆ.
ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಇಎ) ವರೆಗೆ ನೀಲಿ ಮಾರ್ಗದಲ್ಲಿ ಕ್ರೇಜ್ ಸಹಾಯದಿಂದ ನಿರ್ಮಾಣ ಕೆಲಸ ನಡೆಯುತ್ತಿದೆ. ಈ ವೇಳೆ ನಗರದ ಎಚ್ಎಸ್ಆರ್ ಲೇಔಟ್ನ 5ನೇ ಮುಖ್ಯರಸ್ತೆ ಮತ್ತು 14ನೇ ಮುಖ್ಯರಸ್ತೆ ನಡುವಿನ ಸರ್ವೀಸ್ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಕ್ರೇನ್ ಮುರಿದು ಬಿದ್ದ ಘಟನೆ ನಡೆದಿದೆ. ಹೀಗಾಗಿ ಸಂಚಾರ ದಟ್ಟಣೆ ಭಾರೀ ಪ್ರಮಾಣದಲ್ಲಿ ಕಂಡು ಬಂತು.
ಸರತಿ ಸಾಲಿನಲ್ಲಿ ನಿಂತಿದ್ದ ವಾಹನಗಳು, ಭಾರೀ ದಟ್ಟಣೆ
ಸಾಮಾನ್ಯವಾಗಿ ಈ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ದಟ್ಟಣೆ ಕಂಡು ಬರುತ್ತದೆ. ಇದೀಗ ಕ್ರೇನ್ ಮುರಿದು ಬಿದ್ದ ಪರಿಣಾಮ ಈ ಭಾಗದಲ್ಲಿ ಬಿಎಂಟಿಸಿ 500 ಬಸ್ಗಳೇ ಸರಣಿಯಾಗಿ ನಿಂತಿದ್ದವು. ಖಾಸಗಿ ವಾಹನಗಳು ಬಳಸುವ ಎರಡು-ಪಥದ ಸೇವಾ ರಸ್ತೆಯ ಒಂದು ಲೇನ್ ಅನ್ನು ಆಕ್ರಮಿಸಿಕೊಂಡ ದೃಶ್ಯ ಕಂಡು ಬಂತು. ಟ್ರಾಫಿಕ್ ನಲ್ಲಿ ಸವಾರರು ಪರದಾಡಿದರು.
ರಾಗಿಗುಡ್ಡ ಕಡೆಯಿಂದ ಮತ್ತು ಸಿಲ್ಕ್ ಬೋರ್ಡ್ ಕಡೆಗೆ, ಮಡಿವಾಳದಿಂದ ಜಂಕ್ಷನ್ ಕಡೆಗೆ ಬಂದ ವಾಹನಗಳು ಹಾಗೂ ಇಬ್ಬಲೂ ಕಡೆಗೆ ಚಲಿಸುವ ವಾಹನಗಳು ಟ್ರಾಫಿಕ್ನಲ್ಲಿ ಗಂಟೆ ಗಟ್ಟಲೇ ಸಿಕ್ಕಿ ಹಾಕಿಕೊಂಡವರು. ಬೆಳಿಗ್ಗೆ 8.30 ರಿಂದ 10 ರ ವರೆಗೆ ತೀರಾ ನಿಧಾನಗತಿಯಲ್ಲಿ ವಾಹನಗಳು ಸಂಚರಿಸಿದವು.
ಬೆಳಗ್ಗೆ 5 ಗಂಟೆಗೆ ಕೆಲಸ ಆರಂಭಿಸಲು ಕ್ರೇನ್ ಆನ್
ನೀಲಿ ಮಾರ್ಗದಲ್ಲಿ ಸುಸೂತ್ರವಾಗಿ ಕೆಲಸ ನಡೆಯುತ್ತಿತ್ತು. ಆದರೆ ತಾಂತ್ರಿಕ ದೋಷ ಉಂಟಾಗಿದ್ದರಿಂದ ಕ್ರೇಜ್ ಬಿದ್ದಿದೆ ಎಂದು ಪೊಲೀಸರು ತಿಳಿಸಿದರು. ಕಳೆದ ರಾತ್ರಿಯ ಕೆಲಸದ ನಂತರ, ಬೆಳಗ್ಗೆ ಬೇಗನೇ ಕೆಲಸ ಆರಂಭಿಸುವ ಕಾರಣಕ್ಕಾಗಿ ಕ್ರೇನ್ ಆಪರೇಟರ್ಗಳು ಬೆಳಗ್ಗೆ 5 ಗಂಟೆಗೆ ಕ್ರೇನ್ ವಾಹನ ಎಂಜಿನ್ ಸ್ಟಾರ್ಟ್ ಮಾಡಿದರು.
ನೋಡ ನೋಡುತ್ತಿದ್ದಂತೆ ಕ್ರೇನ್ ಬಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಉಂಟಾಯಿತು. ಅಧಿಕಾರಿಗಳು ಮತ್ತು ಮೆಕ್ಯಾನಿಕ್ಗಳು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸುತ್ತಿದ್ದಾರೆ. ಜಂಕ್ಷನ್ ಅಲ್ಲದೇ ಹೊರ ವರ್ತುಲ ರಸ್ತೆಯ ಮುಖ್ಯ ಮಾರ್ಗದಲ್ಲಿ ಯಾವುದೇ ಅಡಚಣೆ ಇಲ್ಲದೇ ವಾಹನ ಚಲಿಸಿದವು ಎಂದು HSR ಬಡಾವಣೆ ಪೊಲೀಸರು ಮಾಹಿತಿ ನಿಡಿದರು.