ನವದಹೆಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳು ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಣೆ ಮಾಡದ ಗ್ರಾಹಕರಿಂದ ಕೋಟಿಗಟ್ಟಲೆ ದಂಡ ವಸೂಲಿ ಮಾಡುತ್ತಿವೆ. ಈ ದಂಡ ವ್ಯವಸ್ಥೆ ಪ್ರಧಾನಿ ಮೋದಿಯವರ ಚಕ್ರವ್ಯೂಹ ತಂತ್ರದ ಭಾಗವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜುಲೈ 30) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಅಮೃತಕಾಲದಲ್ಲಿ ಸಾಮಾನ್ಯ ಭಾರತೀಯರ ಖಾಲಿ ಜೇಬನ್ನು ಸಹ ಕತ್ತರಿಸಲಾಗುತ್ತಿದೆ. ತನ್ನ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿದ ಸರ್ಕಾರ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಲು ಸಾಧ್ಯವಾಗದ ಬಡ ಜನರಿಂದ 8,500 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ದಂಡ ಪದ್ಧತಿ ಮೋದಿಯವರ ಚಕ್ರವ್ಯೂಹದ ಬಾಗಿಲಾಗಿದ್ದು, ಈ ಮೂಲಕ ಸಾಮಾನ್ಯ ಭಾರತೀಯನ ಬೆನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಭಾರತದ ಜನರು ಅಭಿಮನ್ಯು ಅಲ್ಲ, ಅವರು ಅರ್ಜುನರು ಎಂಬುದನ್ನು ನೆನಪಿಡಿ. ಚಕ್ರವ್ಯೂಹವನ್ನು ಒಡೆಯುವ ಮೂಲಕ ನಿಮ್ಮ ಪ್ರತಿಯೊಂದು ದೌರ್ಜನ್ಯಕ್ಕೆ ಹೇಗೆ ಉತ್ತರಿಸಬೇಕೆಂದು ಅವರಿಗೆ ತಿಳಿದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
21ನೇ ಶತಮಾನದಲ್ಲಿ ರಚಿಸಲಾದ ಚಕ್ರವ್ಯೂಹದಲ್ಲಿ ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಸೇರಿ ಅಭಿಮನ್ಯುವನ್ನು ಸುತ್ತವರೆದು ಕೊಂದರು. ಆದರೆ ಇಂದಿನ ಚಕ್ರವ್ಯೂಹದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಈ ಆರು ಜನರಿದ್ದಾರೆ. ಈ ಆರು ಜನರ ಚಕ್ರವ್ಯೂಹ ಕೇಂದ್ರವನ್ನು ನಿಯಂತ್ರಿಸುತ್ತಿದೆ ಎಂದು ಈ ಹಿಂದೆ ರಾಹುಲ್ಗಾಂಧಿ ಹೇಳಿದ್ದರು.