KSRTC, BMTCಯಿಂದ ಟಿಕೆಟ್ ದರ ಏರಿಕೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ

ಕಾರ್ಯಾಚರಣೆ ವೆಚ್ಚ ಕಡಿತ ಉದ್ದೇಶ: ಹೆಚ್ಚೆಚ್ಚು ಕಂಡಕ್ಟರ್ ರಹಿತ ಬಸ್ ಓಡಿಸಲು KSRTC ಕ್ರಮ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪಂಚ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಮಹಿಳಾ ಮಣಿಗಳು ಸಖತ್ ಖುಷಿಯಾಗಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಆದರೆ ಮಹಿಳೆಯರ ಈ ಉಚಿತ ಪ್ರಯಾಣದ ಹೊರೆಯನ್ನು ಪುರುಷ ಪ್ರಯಾಣಿಕರು ಹೋರುವ ಸ್ಥಿತಿ ಬರಬೇಕಾಗಬಹುದು.

ಹೌದು… ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರದ ಮುಂದೆ ಪ್ರಸ್ತಾಪಿಸಿವೆ. ಹೀಗಾಗಿ ಪ್ರಸ್ತಾವನೆಯಂತೆ ಸರ್ಕಾರ ಪ್ರಯಾಣ ದರಕ್ಕೆ ಒಪ್ಪಿಗೆ ಸೂಚಿಸಿದರೆ ಇದರ ಹೊಡೆತ ಪುರುಷ ಪ್ರಯಾಣಿಕರ ಮೇಲೆ ಬೀಳಲಿದೆ. ಜೊತೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಸರ್ಕಾರದ ಮೇಲೆಯೇ ಇದರ ಹೊರೆ ಬೀಳಲಿದೆ.

ಹೀಗಾಗಿ ಸರ್ಕಾರ ಈ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಶೇಕಡ 15 ರಿಂದ 20 ರಷ್ಟು ಏರಿಕೆಗೆ ಸಾರಿಗೆ ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಂಟಿಸಿ ಬರೋಬ್ಬರಿ ಶೇ.37ರಷ್ಟು ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರೆ, ಎನ್ಡಬ್ಲ್ಯೂಕೆಆರ್ಟಿಸಿ ಶೇ. 30 ಹಾಗೂ ಕೆಕೆಆರ್ಟಿಸಿ ಶೇ 30 ರಷ್ಟು ಟಿಕೆಟ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿವೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆದಾಯ ಹೆಚ್ಚಾಗಿದೆ. ಆದರೆ ಸಿಬ್ಬಂದಿ ವೇತನ, ಡೀಸೆಲ್, ಬಿಡಿ ಭಾಗಗಳ ಬೆಲೆ ಹೆಚ್ಚಳದಿಂದ ನಿಗಮಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ಶೇಕಡ ಪ್ರಯಾಣ ದರ ಹೆಚ್ಚಳಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಪ್ರಸ್ತಾವನೆಗೆ ಅನುಮೋದನೆ ನೀಡುವ ಹೊಣೆಯನ್ನು ಸಿಎಂಗೆ ಬಿಡಲಾಗಿದೆ. ಈಗಾಗಲೇ ಪ್ರಸ್ತಾವನೆ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ಇನ್ನಿ ಕೆಲವೇ ದಿನಗಳಲ್ಲಿ ಸಿಎಂ ಸಭೆ ನಡೆಸಿ ದರ ಹೆಚ್ಚಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ನಾಲ್ಕು ವರ್ಷಗಳಾಗಿದ್ದರೆ, ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಿ ಬರೋಬ್ಬರಿ ಹತ್ತು ವರ್ಷಗಳಾಗಿವೆ. ನಾಲ್ಕು ನಿಗಮದ ಬಸ್ಸುಗಳಿಗೆ ಡಿಸೇಲ್ ಹಾಕಿಸಲು ತುಂಬಾ ಕಷ್ಟ ಆಗುತ್ತಿದೆ. ಹೆಚ್ಚುವರಿಯಾಗಿ ತಿಂಗಳಿಗೆ ಹದಿನೈದು ಕೋಟಿ ರೂಪಾಯಿ ಹಣ ಬೇಕಾಗುತ್ತಿದ್ದು ವರ್ಷಕ್ಕೆ 190-200 ಕೋಟಿಯಷ್ಟು ಹೆಚ್ಚುವರಿ ಹೊರೆ ಆಗುತ್ತದೆ ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ತಿಳಿಸಿವೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ(Shakti scheme) ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ. ಸರ್ಕಾರ ಯಾವುದೇ ಸಂದರ್ಭದಲ್ಲಾದರೂ ಉಚಿತ ಪ್ರಯಾಣವನ್ನು ನಿಲ್ಲಿಸಬಹುದು ಎಂಬ ಕಾರಣಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಪುರುಷ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದ್ದು ಆದಾಯ ಹೆಚ್ಚಾಗಿದೆ.

Leave a Reply

Your email address will not be published. Required fields are marked *