ಪ್ರೇಮದ ನಗರಿ, ಬೆಳಕಿನ ನಗರಿ ಎಂಬ ಜನಪ್ರಿಯತೆಯ ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ 2024ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. 200ಕ್ಕೂ ವಿವಿಧ ದೇಶಗಳ ಸಾವಿರಾರು ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಪದಕಗಳಿಗಾಗಿ ಜಿದ್ದಾಜಿದ್ದಿನಿಂದ ಸ್ಪರ್ಧಿಸುತ್ತಿದ್ದಾರೆ. ಆಯಾಯ ದೇಶಗಳ ಕೋಟ್ಯಂತರ ಜನರು ಟಿವಿ, ಮೊಬೈಲ್ನಲ್ಲಿ ಕ್ರೀಡಾಕೂಟ ವೀಕ್ಷಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಆದರೆ ನಿಮಗಿದು ಗೊತ್ತಾ? ನಾವೂ ಕೂಡ ಒಲಿಂಪಿಕ್ಸ್ ಗೇಮ್ಸ್ ಆಡಬಹುದು!. ಹೌದು. ಗೂಗಲ್ ನಮಗಾಗಿ ಈ ಅವಕಾಶ ನೀಡಿದೆ. ಹಾಗಂತ ಪ್ಯಾರಿಸ್ಗೆ ಹೋಗಬೇಕಿಲ್ಲ, ಮೊಬೈಲ್, ಡೆಸ್ಕ್ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಇದ್ದರೆ ಸಾಕು.
ಗೂಗಲ್ ಈ ಬಾರಿಯ ಒಲಿಂಪಿಕ್ಸ್ ಆರಂಭವಾದಾಗಿನಿಂದ ಪ್ರತೀ ದಿನ ವಿಶೇಷ ಡೂಡಲ್ ಅನ್ನು ತನ್ನ ಹೋಮ್ಪೇಜ್ನಲ್ಲಿ ಪ್ರಕಟಿಸುತ್ತಿದೆ. ಇಂದು ಅನಿಮೇಟೆಡ್ ಡೂಡಲ್ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ ಎಂಬ ಪಿಕ್ಚರ್ ಪಝಲ್ ಗೇಮ್ ನೀಡಿದೆ. ಇದನ್ನು ಯಾರು ಬೇಕಾದರೂ ಆಡಬಹುದು.
ಹೀಗೆ ಆಡಿ: ಮೊದಲು ಗೂಗಲ್ ಪುಟ ತೆರೆಯಿರಿ. ಅಲ್ಲಿ ಮೂರು ಅನಿಮೇಟೆಡ್ ಚಿತ್ರಗಳೊಂದಿಗೆ ಗೂಗಲ್ ಎಂದು ಬರೆದಿದೆ. ಅದನ್ನು ಕ್ಲಿಕ್ ಮಾಡಿ. ನಿಮಗೆ ಇಂದಿನ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ How to Play ಮತ್ತು Let’s Play ಎಂಬ ಆಯ್ಕೆಗಳಿವೆ. ಗೇಮ್ ಬಗ್ಗೆ ಮಾಹಿತಿ ಬೇಕಾದಲ್ಲಿ ಸಹಾಯ ತೆಗೆದುಕೊಂಡು ಆಡಬಹುದು. ಇಡೀ ಪೇಜ್ನಲ್ಲಿ ನಿಮಗೆ ಅನಿಮೇಟೆಡ್ ಪ್ಯಾರಿಸ್ ನಗರದ ಚಿತ್ರದೊಂದಿಗೆ ನೂರಾರು ಜನರು, ಒಲಿಂಪಿಕ್ಸ್ ಕ್ರೀಡಾಪಟುಗಳು ಕಾಣಿಸುತ್ತವೆ. ಇಲ್ಲಿ ನಿಮಗೆ ಜೂಮ್ ಇನ್, ಜೂಮ್ ಔಟ್ ಅವಕಾಶವೂ ಇದೆ.
ಒಲಿಂಪಿಕ್ಸ್ ಕ್ರೀಡೆಗೆ ಸಂಬಂಧಿಸಿದ 20 ಕ್ರೀಡೆಗಳ ಸ್ಫರ್ಧಿಗಳನ್ನು ನೀವು ಇಲ್ಲಿ ಹುಡುಕಬೇಕು. ಪರದೆಯ ಬಲಭಾಗದಲ್ಲಿ ವಿವಿಧ ಚಿತ್ರಗಳಿವೆ. ಅದರಲ್ಲಿ ಒಂದನ್ನು ಟ್ಯಾಪ್ ಮಾಡಿ. ಬಳಿಕ ಆ ಚಿತ್ರ ಪ್ಯಾರಿಸ್ನ ಪ್ಲೇಗ್ರೌಂಡ್ನಲ್ಲಿ ಎಲ್ಲಿದೆ ಎಂಬುದನ್ನು ಹುಡುಕಿ ಕ್ಲಿಕ್ಕಿಸಿ. ಹೀಗೆ ಒಂದೊಂದನ್ನೇ ಹುಡುಕುತ್ತಾ 20 ಚಿತ್ರವನ್ನು ಕಂಡುಹಿಡಿದರೆ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ನಲ್ಲಿ ನೀವು ಚಿನ್ನದ ಪದಕ ಗೆದ್ದಂತೆ!.