ಮಂಗಳೂರು: ಬಂದರು ನಗರಿ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಮಾಡುವ ರಸ್ತೆಗಳಿಗೆ ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾನಿಯನ್ನುಂಟು ಮಾಡುತ್ತಿದೆ. ಪರಿಣಾಮ ಮಂಗಳೂರು ಬೆಂಗಳೂರು ನಡುವೆ ರಸ್ತೆ ಸಂಚಾರ, ರೈಲು ಸಂಚಾರಕ್ಕೆ ವಿಘ್ನಗಳು ಎದುರಾಗಿವೆ. ಸದ್ಯ ಮಂಗಳೂರು ಬೆಂಗಳೂರು ನಡುವೆ ಸಂಪರ್ಕಿಸುವ ಪ್ರಮುಖ ರಸ್ತೆ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ಮತ್ತೊಂದೆಡೆ ಸಕಲೇಶಪುರ ಭಾಗದಲ್ಲಿ ರೈಲ್ವೆ ಮಾರ್ಗದಲ್ಲಿ ಗುಡ್ಡ ಕುಸಿತವುಂಟಾಗಿರುವುದರಿಂದ ರೈಲು ಸಂಚಾರವು ಬಂದ್ ಸ್ಥಗಿತವಾಗಿದೆ.
ಮಂಗಳೂರು ಬೆಂಗಳೂರು ನಡುವೆ ಸಂಚಾರಕ್ಕೆ ಮೂರು ರೀತಿಯ ವ್ಯವಸ್ಥೆಗಳಿವೆ. ರಸ್ತೆ, ರೈಲು ಸಾರಿಗೆ, ವಿಮಾನ ಸಂಚಾರದ ಮೂಲಕ ಮಂಗಳೂರು ಬೆಂಗಳೂರು ನಡುವೆ ಸಂಪರ್ಕ ಬೆಸೆಯಬಹುದು. ಇದರಲ್ಲಿ ಬಹುತೇಕ ಜನರು ಬಳಸುವುದು ರಸ್ತೆ ಸಾರಿಗೆಯನ್ನು. ಈ ಎರಡು ನಗರಗಳನ್ನು ಪ್ರಮುಖ ಮೂರು ರಸ್ತೆಗಳು ಸಂಪರ್ಕಿಸುತ್ತದೆ. ಇದರಲ್ಲಿ ಪ್ರಮುಖ ರಸ್ತೆ ಉಪ್ಪಿನಂಗಡಿಯಿಂದ ಹಾಸನ ಸಂಪರ್ಕಿಸುವ ಶಿರಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸುವ ಹೆದ್ದಾರಿ. ಇನ್ನೊಂದು ಬೆಳ್ತಂಗಡಿಯ ಉಜಿರೆಯಿಂದ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ಹೆದ್ದಾರಿ. ಮೂರನೇಯದು ಸುಳ್ಯದಿಂದ ಮಡಿಕೇರಿ ಸಂಪರ್ಕಿಸುವ ಸಂಪಾಜೆ ಘಾಟಿ ಹೆದ್ದಾರಿ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವವರು ತಮಗೆ ಅನುಕೂಲವಾಗುವ ಮೂರು ಘಾಟಿಗಳಲ್ಲಿ ಯಾವುದಾದರೂ ಒಂದು ಘಾಟಿ ಮೂಲಕ ತೆರಳಿ ಮಂಗಳೂರು ಬೆಂಗಳೂರು ಸಂಪರ್ಕ ಬೆಳೆಸುತ್ತಾರೆ. ಇದರಲ್ಲಿ ಹೆಚ್ಚಿನವರ ಆಯ್ಕೆ ಶಿರಾಡಿ ಘಾಟ್ ಸಂಚರಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟ ತಪ್ಪಲಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸಂಪರ್ಕಿಸಬೇಕಾದರೆ ಪಶ್ಚಿಮ ಘಟ್ಟವನ್ನು ದಾಟಿಕೊಂಡೆ ಹೋಗಬೇಕು. ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಅನಾಹುತಗಳು ಸಾಮಾನ್ಯ. ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ ರಸ್ತೆಗಳ ಮೇಲೆ ಮಳೆಗಾಲದಲ್ಲಿ ಗುಡ್ಡ ಕುಸಿದು ಆಗಾಗ ಅವಾಂತರ ಸೃಷ್ಟಿಯಾಗುತ್ತದೆ. ಈ ಬಾರಿಯು ಶಿರಾಡಿ ಘಾಟ್ ರಸ್ತೆಯಲ್ಲಿ ಹಲವೆಡೆ ಗುಡ್ಡ ಕುಸಿತಗಳಾಗಿ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ತೊಂದರೆಯಾದಾಗ ಸವಾರರು ಚಾರ್ಮಾಡಿ ಘಾಟ್ ಅಥವಾ ಸಂಪಾಜೆ ಘಾಟ್ ಬಳಸುತ್ತಾರೆ. ಆದರೆ ಈ ಚಾರ್ಮಾಡಿ ರಸ್ತೆ ಶಿರಾಡಿ ಘಾಟ್ನಷ್ಟು ಉತ್ತಮವಾಗಿಲ್ಲ. ಅಗಲ ಕಿರಿದಾಗಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಮಂಗಳೂರು ಬೆಂಗಳೂರು ಸಂಪರ್ಕಕ್ಕೆ ದೂರ ದಾರಿಯಾಗಿರುವ ಸಂಪಾಜೆ ಘಾಟ್ನಲ್ಲಿ ಪ್ರಯಾಣ ಬೆಳೆಸಲು ಕೊನೆಯ ಆಯ್ಕೆಯನ್ನು ನೋಡುತ್ತಾರೆ. ಈ ಬಾರಿ ಶಿರಾಡಿ ಘಾಟ್ನಲ್ಲಿ ಹಲವು ಬಾರಿ ಗುಡ್ಡ ಕುಸಿತ ಆಗಿರುವುದರಿಂದ ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಮೂಲಕ ಸಂಚರಿಸಲಾಗುತ್ತಿದೆ.
ರೈಲು ಮಾರ್ಗದಲ್ಲೂ ಇದೇ ಸಮಸ್ಯೆ: ಇನ್ನು ಮಂಗಳೂರು ಬೆಂಗಳೂರು ಸಂಪರ್ಕಕ್ಕೆ ಇರುವ ರೈಲು ಮಾರ್ಗಕ್ಕೂ ಮಳೆಗಾಲದಲ್ಲಿ ವಿಘ್ನಗಳು ಎದುರಾಗುತ್ತವೆ. ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ ರೈಲು ಮಾರ್ಗದಲ್ಲಿ ವರ್ಷಕ್ಕೆ ಒಂದು ಬಾರಿ ಗುಡ್ಡ ಕುಸಿತ ಪ್ರಕರಣಗಳು ನಡೆದು ಕೆಲ ದಿನಗಳ ರೈಲು ಸಂಚಾರ ರದ್ದು ಆಗುತ್ತದೆ. ಈ ಬಾರಿಯು ಇದೇ ರೀತಿಯ ಸಮಸ್ಯೆ ಆಗಿದ್ದು, ಇನ್ನು 15 ದಿನ ಈ ಭಾಗದಲ್ಲಿ ರೈಲಿನ ಓಡಾಟ ರದ್ದು ಆಗಿದೆ.
ದುಬಾರಿ ವಿಮಾನ: ಮಂಗಳೂರು ಬೆಂಗಳೂರು ಸಂಪರ್ಕಕ್ಕೆ ವಿಮಾನ ಸಂಪರ್ಕ ಇದ್ದರೂ ಇದು ಬಡವರಿಗೆ, ಮಧ್ಯಮ ವರ್ಗದವರಿಗೆ ಎಟುಕುವಂತದ್ದಲ್ಲ. ವಿಮಾನ ದರ ದುಬಾರಿಯಾಗಿರುವದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನ ಭರಿಸುವುದು ಕಷ್ಟ. ಆದರೂ ಅನಿವಾರ್ಯವೆಂಬಂತೆ ಕೆಲವರು ವಿಮಾನ ಸಂಚಾರ ನೆಚ್ಚಿಕೊಳ್ಳುತ್ತಾರೆ.
ಸದ್ಯ ಇರುವ ದಾರಿ: ಮಂಗಳೂರು ಬೆಂಗಳೂರು ಸಂಪರ್ಕಕ್ಕೆ ಸದ್ಯ ಮೂರು ರಸ್ತೆಗಳು ಇದ್ದರೂ ಈ ಮೂರು ರಸ್ತೆಗಳು ಪಶ್ಚಿಮ ಘಟ್ಟ ದಾಟಿ ಹೋಗಬೇಕಾಗುವುದರಿಂದ ಈ ರಸ್ತೆಯಲ್ಲಿ ಯಾವಾಗ ಗುಡ್ಡ ಜರಿತವಾಗಿ ರಸ್ತೆ ಸಂಚಾರ ನಿಲ್ಲುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬುಧವಾರ ರಾತ್ರಿ ಶಿರಾಡಿ ಘಾಟ್ನಲ್ಲಿ ದೊಡ್ಡ ತಪ್ಲೆ ಬಳಿ ಗುಡ್ಡ ಕುಸಿತ ಆಗಿರುವುದರಿಂದ ಶಿರಾಡಿ ಘಾಟ್ ರಸ್ತೆ ಮುಚ್ಚಲಾಗಿದೆ.
ಇದೀಗ ಬೆಂಗಳೂರು ಮಂಗಳೂರು ಸಂಪರ್ಕಕ್ಕೆ ಇರುವ ಮಾರ್ಗಗಳು
ಚಾರ್ಮಾಡಿ ಘಾಟ್ ಮೂಲಕ ಸಂಚಾರ ಮಾಡಬಹುದು
ಸಂಪಾಜೆ ಘಾಟ್ ಮೂಲಕ ಸಂಚಾರ ಮಾಡಬಹುದು
ವಿಮಾನದ ಮೂಲಕ ಸಂಚಾರ ಮಾಡಬಹುದು
ರೈಲಿನಲ್ಲಿ ಮಂಗಳೂರಿನಿಂದ ತಮಿಳುನಾಡಿದ ಸೇಲಂ ತಲುಪಿ ಅಲ್ಲಿಂದ ಬೆಂಗಳೂರು ತಲುಪಬಹುದು