ತುಮಕೂರು:- ಕಲ್ಪತರು ನಾಡು ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಅಂಧರಿಗೆ ದೃಷ್ಟಿ ಭಾಗ್ಯ ನೀಡುವ ಮಹತ್ವದ ಐ ಬ್ಯಾಂಕ್ ಹಾಗೂ ನೇತ್ರಕಸಿ ಘಟಕದ ಆರಂಭಕ್ಕೆ ಗ್ರಹಣ ಹಿಡಿದಿದೆ.
ಹೌದು, ನೇತ್ರದಾನ ಮಹಾದಾನ ಎನ್ನುತ್ತೇವೆ. ಆದರೆ, ದಾನ ಸಿಕ್ಕ ನೇತ್ರವನ್ನ ಅಂಧರಿಗೆ ಕಸಿ ಮಾಡಿ ಅವರ ಬಾಳಿಗೆ ಬೆಳಕು ನೀಡುವ ಯೋಜನೆ ಮಾತ್ರ ಕಳೆದ ಎರಡ್ಮೂರು ವರ್ಷಗಳಿಂದ ಹಳ್ಳಹಿಡಿದಿದೆ.
ಎಲ್ಲವೂ ಯೋಜನೆಯ ರೂಪು-ರೇಷೆಯಂತೆ ಅಂದುಕೊಂಡಂತೆ ನಿಗಧಿತ ಸಮಯಕ್ಕೆ ಆಗಿದ್ದರೆ ಕಲ್ಪತರು ನಾಡು ತುಮಕೂರು ಜಿಲ್ಲಾಸ್ಪತ್ರೆ ರಾಜ್ಯದಲ್ಲಿಯೇ ಮೊದಲ ಜಿಲ್ಲಾ ನೇತ್ರ ಬ್ಯಾಂಕ್ ಹೊಂದಿದ ಕೀರ್ತಿಗೆ ಭಾಜನವಾಗುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ.
ರಾಜ್ಯದ ಮೊದಲ ಜಿಲ್ಲಾ ಐ ಬ್ಯಾಂಕ್ ಅನ್ನ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲು 2021ರಲ್ಲಿ ಅಗತ್ಯ ಸಿದ್ಧತೆ ನಡೆದಿದ್ದವು. ಈ ನೇತ್ರ ಬ್ಯಾಂಕ್ ನಲ್ಲಿ ನೇತ್ರ ಸಂಗ್ರಹದ ಜೊತೆಗೆ ನೇತ್ರ ಕಸಿ ಘಟಕವನ್ನೂ ಸಹ ಆರಂಭಿಸಲು ಕೇಂದ್ರ ಸರ್ಕಾರ ಮತ್ತು ಕಾಪ್ ರಾಡ್ ಸಂಸ್ಥೆಯ ಸಿಎಸ್ ಆರ್ ಪೌಂಡ್ ನೆರವಿನೊಂದಿಗೆ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಂಡು ಬೇಕಾದ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೇತ್ರದಾನಿಗಳ ನೇತ್ರ ಸಂಗ್ರಹಿಸಿ ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ಕಳುಹಿಸಿಕೊಡುವ ಕೆಲಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃತರ ದಾನದ ನೇತ್ರವನ್ನು ಇಲ್ಲಿಯೇ ಸಂಗ್ರಹಿಸಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಕಸಿ ಮಾಡುವ ಐ ಬ್ಯಾಂಕ್ ಮತ್ತು ನೇತ್ರ ಕಸಿ ಘಟಕ ಆರಂಭಕ್ಕೆ ಆತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಂತನೆ ಮಾಡಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿತ್ತು. ಆದರೆ, ಆ ಕಾರ್ಯ ಪರಿಪೂರ್ಣವಾಗಿಲ್ಲ. ಯೋಜನೆ ಅರ್ಧಕ್ಕೆ ನಿಂತಿದೆ. ಐ ಬ್ಯಾಂಕ್ ಗೆ ಬೇಕಾದ ಯಂತ್ರೋಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಯಂತ್ರೋಪಕರಣಗಳ ಖರೀದಿಗಾಗಿ ಈಗಾಗಲೇ 40 ಲಕ್ಷ ಅನುದಾನವನ್ನು ಈಗಾಗಲೇ ಆರೋಗ್ಯ ಇಲಾಖೆಗೆ ಬಿಡುಗಡೆ ಮಾಡಿದೆ.
ಕಟ್ಟಡ ನಿರ್ಮಾಣ ಮಾಡಿಕೊಟ್ಟಿದೆ ಕಾಪ್ ರಾಡ್ ಸಂಸ್ಥೆ:- ಐ ಬ್ಯಾಂಕ್ ಆರಂಭಕ್ಕೆ ಪೂರಕವಾದ ಕಟ್ಟಡವನ್ನು ಕಾಪ್ ರಾಡ್ ಸಂಸ್ಥೆಯ ಸಿಎಸ್ ಆರ್ ಪೌಂಡ್ ನಿಂದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಚಂದ್ರಶೇಖರ್ 2021 ಸಾಲಿನಲ್ಲೇ ನಿರ್ಮಿಸಿ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದ್ದಾರೆ. ಒಟ್ಟು 2500 ಚದುರ ಅಡಿಯ ಆರು ಕೊಠಡಿಯ ಕಟ್ಟಡವನ್ನು ಸುಮಾರು 45 ಲಕ್ಷ ವೆಚ್ವದಲ್ಲಿ ನಿರ್ಮಾಣ ಮಾಡಲಾಗಿದೆ.
ಆರಂಭಕ್ಕೆ ವಿಳಂಬವೇಕೆ:- ಐ ಬ್ಯಾಂಕ್ ಆರಂಭಕ್ಕೆ ಪೂರಕವಾದ ಕಟ್ಟಡವಿದೆ. ಕೇಂದ್ರ ಸರ್ಕಾರ 40 ಲಕ್ಷ ಅನುದಾನವನ್ನು ಕೊಟ್ಟಿದೆ. ಆದರೆ, ಆರಂಭ ಮಾತ್ರ ವಿಳಂಬವಾಗುತ್ತಲೇ ಇದೆ. ಆರಂಭಕ್ಕೆ ತಾಂತ್ರಿಕ ವಿಘ್ನಗಳು ಕಾರಣ ಎಂಬುದು ಅಧಿಕಾರಿಗಳ ವಾದವಾಗಿದೆ. ಐ ಬ್ಯಾಂಕ್ ಗೆ ಬೇಕಾದ ಯಂತ್ರೋಪಕರಣ ಖರೀದಿ ಸಂಬಂಧ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್ ಗೆ ಒಬ್ಬರು ಮಾತ್ರ ಮುಂದೆ ಬಂದಿದ್ದಾರೆ.ಹಾಗಾಗಿ ಕಾನೂನಿನ ತೊಡಕು ಎದುರಾಗಿದೆ. ಒಬ್ಬರು ಬಿಡ್ ನಲ್ಲಿ ಅರ್ಜಿ ಸಲ್ಲಿಸಿದಾಗ ಕಾನೂನಿನಡಿ ಅದಕ್ಕೆ ಒಪ್ಪಿಗೆ ಕೊಡಲಾಗುವುದು ಸಾಧ್ಯವಿಲ್ಲ ಎಂಬುದು ಯೋಜನೆ ಆರಂಭಕ್ಕೆ ಎದುರಾಗಿರುವ ಸಮಸ್ಯೆಯಾಗಿದೆ.
ಐ ಬ್ಯಾಂಕ್ ಆರಂಭದ ಪ್ರಕ್ರಿಯೆ ಸಂಬಂಧ ಟೆಂಡರ್ ಕರೆಯಲಾಗಿದೆ. ಆದರೆ, ಒಬ್ಬರು ಮಾತ್ರ ಟೆಂಡರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ತಾಂತ್ರಿಕ ಕಾರಣದಿಂದಾಗಿ ಆರಂಭ ವಿಳಂಬ ವಾಗಿದೆ. ಶೀಘ್ರ ಆರಂಭಿಸಲು ಕ್ರಮ ವಹಿಸಲಾಗುವುದು.
ಡಾ. ಅಸ್ಗರ್ ಬೇಗ್, ಜಿಲ್ಲಾ ಶಸ್ತ್ರ ಚಿಕಿತ್ಸಕರು
ಐ ಬ್ಯಾಂಕ್ ಆರಂಭವಾದರೆ ತುಮಕೂರು ಜಿಲ್ಲೆಯಲ್ಲಿಯೇ ಕಣ್ಣುಗಳನ್ನು ಕಸಿ ಮಾಡಿ ಅಂಧರಿಗೆ ಬೆಳಕು ನೀಡಬಹುದು. ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ. ಕೆಲವು ಸಮಸ್ಯೆಗಳಿಂದಾಗಿ ಆರಂಭ ವಿಳಂಬವಾಗುತ್ತಲೇ ಇದೆ.
ಡಾ. ದಿನೇಶ್ ಕುಮಾರ್, ನೇತ್ರ ತಜ್ಞ
ನೇತ್ರಬ್ಯಾಂಕ್‌ನಲ್ಲಿ ನೇತ್ರ ಸಂಗ್ರಹಣೆ ಜೊತೆಗೆ ನೇತ್ರ ಕಸಿ ಮಾಡುವ ಯೋಜನೆಗಾಗಿ ಕಾಪ್ ರಾಡ್ ಸಂಸ್ಥೆಯ ಸಿಎಸ್ ಆರ್ ನಿಂದ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದೆ. ಆದರೆ, ಆ ಕಟ್ಟಡ ಈಗ ವ್ಯರ್ಥವಾಗುತ್ತಿದೆ. ವ್ಯರ್ಥವಾಗಲು ಬಿಡದೆ ಯೋಜನೆ ಆರಂಭಕ್ಕೆ ಅಧಿಕಾರಿಗಳು ಮುಂದಾಗಬೇಕು. ಪ್ರಸ್ತುತ ನೇತ್ರ ಸಂಗ್ರಹಣಾ ಕೇಂದ್ರ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐ ಬ್ಯಾಂಕ್ ಆದರೆ ರಾಜಧಾನಿಗೆ ಅಲೆಯುವುದು ತಪ್ಪುತ್ತದೆ. ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದ ಡಾ. ವೀರಭದ್ರಯ್ಯ ಇದ್ದ ಸಂದರ್ಭದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಆದರೆ ಇನ್ನೂ ಕಾರ್ಯಗತವಾಗಿಲ್ಲ. ಒಂದು ಒಳ್ಳೆ ಸದುದ್ದೇಶದಿಂದ ಮಾಡಿದ್ದ ಮಹತ್ವದ ಕಾರ್ಯ ಆರಂಭವಾಗಿಲ್ಲ. ಸಮಸ್ಯೆಗಳೇನೆ ಇದ್ದರು ಬಗೆಹರಿಸಬೇಕು. ಆರಂಭಿಸಿ ಜನರಿಗೆ ಅನುಕೂಲವಾಗುವಂತೆ ಮಾಡಬೇಕು.
ಎಚ್.ಜಿ. ಚಂದ್ರಶೇಖರ್, ಕಾಪ್ ರಾಡ್ ಸಂಸ್ಥೆ, ಎಂ.ಡಿ
ಸಿಬ್ಬಂದಿಗಾಗಿ ಸರ್ಕಾರಕ್ಕೆ ಪತ್ರ
ಐ ಬ್ಯಾಂಕ್ ಕಾರ್ಯನಿರ್ವಹಣೆ ಆರಂಭವಾದರೆ ಅದಕ್ಕೆ ಪೂರಕವಾಗಿ ಸಿಬ್ಬಂದಿ ಬೇಕು. ಹಾಗಾಗಿ ಸಿಬ್ಬಂದಿ ವ್ಯವಸ್ಥೆವಾಗಿ ಅಂದಿನ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಪತ್ರವನ್ನು ಸಹ ಬರೆಯಲಾಗಿದೆ.