ವಾಷಿಂಗ್ಟನ್ : ಫಾಕ್ಸ್ ನ್ಯೂಸ್ ಮಾಧ್ಯಮ ವೇದಿಕೆಯಲ್ಲಿ ಸೆಪ್ಟೆಂಬರ್ 4ರಂದು ನಡೆಯಲಿರುವ ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆಯಲ್ಲಿ ಭಾಗವಹಿಸುವಂತೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಆಹ್ವಾನವನ್ನು ಅಮೆರಿಕದ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿರಸ್ಕರಿಸಿದ್ದಾರೆ.
ಏತನ್ಮಧ್ಯೆ ಎಬಿಸಿ ಮಾಧ್ಯಮ ವೇದಿಕೆಯಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಅಧ್ಯಕ್ಷೀಯ ಚರ್ಚೆಯಲ್ಲಿ ಭಾಗವಹಿಸಲು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿಂದೇಟು ಹಾಕುತ್ತಿದ್ದಾರೆ ಎಂದು ಕಮಲಾ ಅವರ ಚುನಾವಣಾ ಅಭಿಯಾನ ಆರೋಪಿಸಿದೆ.
ನವೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ನಾಮನಿರ್ದೇಶನವನ್ನು ಪಡೆದ ನಂತರ, ಹ್ಯಾರಿಸ್ ಅವರು ಮೂಲತಃ ಯೋಜಿತವಾಗಿರುವ ಚರ್ಚೆಯಲ್ಲಿ ಭಾಗವಹಿಸಲು ತಾವು ಯೋಜಿಸಿರುವುದಾಗಿ ಶನಿವಾರ ಹೇಳಿದರು.
ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಮಲಾ ಹ್ಯಾರಿಸ್, “ಯಾವುದೇ ಸಮಯದಲ್ಲಿ, ಯಾವುದೇ ಸ್ಥಳ’ ಎಂಬುದು ಹೇಗೆ ‘ಒಂದು ನಿರ್ದಿಷ್ಟ ಸಮಯ, ಒಂದು ನಿರ್ದಿಷ್ಟ ಸುರಕ್ಷಿತ ಸ್ಥಳ’ ಆಗುತ್ತದೆ ಎಂಬುದು ಆಸಕ್ತಿದಾಯಕವಾಗಿದೆ” ಎಂದು ಬರೆದಿದ್ದಾರೆ. “ಅವರು ಈ ಹಿಂದೆ ಒಪ್ಪಿದಂತೆ ನಾನು ಸೆಪ್ಟೆಂಬರ್ 10 ರ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇನೆ. ಅವರೂ ಅವತ್ತು ಅಲ್ಲಿಗೆ ಬರುತ್ತಾರೆ ಅಂದುಕೊಂಡಿದ್ದೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಆದರೆ ಫಾಕ್ಸ್ ನ್ಯೂಸ್ ಹೆಚ್ಚು ಜನಪ್ರಿಯವಾಗಿರುವುದರಿಂದ ಚರ್ಚೆಯನ್ನು ಆ ಮಾಧ್ಯಮ ವೇದಿಕೆಗೆ ಬದಲಾಯಿಸಬೇಕೆಂದು ಟ್ರಂಪ್ ಸಲಹೆ ನೀಡಿದ್ದಾರೆ. ಪ್ರಸ್ತಾವಿತ ಚರ್ಚೆಯ ಬಗ್ಗೆ, ಟ್ರಂಪ್ ಶುಕ್ರವಾರ ‘ಟ್ರೂತ್ ಸೋಷಿಯಲ್’ ಹೆಸರಿನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಚರ್ಚೆಯ ನಿಯಮಗಳು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ನಡೆದ ಮೊದಲ ಚರ್ಚೆಯ ರೀತಿಯಲ್ಲಿಯೇ ಇರಲಿವೆ ಎಂದಿದ್ದಾರೆ.
“ಹ್ಯಾರಿಸ್ ಚರ್ಚೆಗೆ ಬರಲು ಹೆದರುತ್ತಿದ್ದಾರೆ. ಸೆಪ್ಟೆಂಬರ್ 4 ರಂದು ಅವರು ಬಂದರೆ ಚರ್ಚೆ ಮಾಡಬಹುದು ಅಥವಾ ನಾನು ಮತ್ತೊಮ್ಮೆ ಅವರೊಂದಿಗೆ ಚರ್ಚೆ ಮಾಡದೇ ಇರುವ ಸಂದರ್ಭವೂ ಎದುರಾಗಬಹುದು” ಎಂದು ಟ್ರಂಪ್ ಶನಿವಾರ ಹೇಳಿದರು.