ತುಮಕೂರು :- ಮಕ್ಕಳ ಮಾರಾಟ ಜಾಲವನ್ನು ಪೊಲೀಸರು ಇತ್ತೀಚೆಗೆ ಭೇದಿಸಿದ್ದು, ಈ ಪ್ರಕರಣ ಮಾಸು ಮುನ್ನವೇ ಮಕ್ಕಳ ಕಳ್ಳತನದ ಯತ್ನ ನಡೆದಿರೋದು ಜನರನ್ನು ಬೆಚ್ಚಿಬೀಳಿಸಿದೆ.
ನಗರದ ಹೊರವಲಯದ ಅಣ್ಣೇನಹಳ್ಳಿ ಕಾರಾಗೃಹದ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕಾರಾಗೃಹ ಬಳಿಯ ಸ್ವರ್ಣಗೃಹ ಬಡಾವಣೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ದ್ವಿ ಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಕ್ಕಳನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಕ್ಕಳು ಅತ್ತಿಂದಿತ್ತ ಓಡಿ ಹೋಗಿ ಕಿರುಚಾಡಿದ ಕಾರಣ ತಕ್ಷಣವೇ ಖದೀಮರು ಕಾಲ್ಕಿತ್ತಿದ್ದಾರೆ.
ದುಷ್ಕರ್ಮಿಗಳ ಕುಕೃತ್ಯದ ಯತ್ನಕ್ಕೆ ತುಮಕೂರಿನ ಜನರಲ್ಲಿ ಆತಂಕ ಮನೆ ಮಾಡಿದೆ. ಮಕ್ಕಳ ಕಿಡ್ನಾಪ್‌ಗೆ ಯತ್ನಿಸಿದ ದೃಶ್ಯ ಸಿ.ಸಿ ಟಿವಿಯಲ್ಲಿ ಲಭ್ಯವಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣ ದಾಖಲಿಸಿಕೊಂಡು ಮಕ್ಕಳ ಕಳ್ಳತನಕ್ಕೆ ಬಂದವರನ್ನು ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.