ಸೇತುವೆ ಕುಸಿತ: ಟ್ರಕ್​ ಕ್ಯಾಬಿನ್ ಏರಿ ಪ್ರಾಣ ಉಳಿಸಿಕೊಂಡ ಚಾಲಕ

ಕಾರವಾರ: ನಗರದ ಕೋಡಿಭಾಗದ ಬಳಿ ಕಾಳಿ ನದಿಯ ಸೇತುವೆ ಕುಸಿದ ವೇಳೆ ಟ್ರಕ್ ಚಾಲಕ ಕ್ಯಾಬಿನ್ ಏರಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಚಾಲಕನನ್ನು ಪೊಲೀಸರು ಹಾಗೂ ಮೀನುಗಾರರು ದೋಣಿ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದಾನೆ.

ತಡರಾತ್ರಿ ನಡೆದ ಈ ದುರಂತದಲ್ಲಿ ಸೇತುವೆ ಕುಸಿದ ಬೆನ್ನಲ್ಲೆ ಟ್ರಕ್ ಕೂಡ ನದಿಗೆ ಬಿದ್ದಿದೆ. ಟ್ರಕ್ ಸಂಪೂರ್ಣ ಮುಳುಗಡೆಯಾಗಿದ್ದು, ಕ್ಯಾಬಿನ್ ಮಾತ್ರ ನೀರಿನಲ್ಲಿ ಕಾಣತೊಡಗಿತ್ತು. ಆಗ ಗಾಯಗೊಂಡಿದ್ದ ಚಾಲಕ ನೀರಿನಿಂದ ಹೊರಬಂದು ಟ್ರಕ್​ ಕ್ಯಾಬಿನ್ ಏರಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದ. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿ ಆಗಮಿಸಿದ ಪೊಲೀಸರು ಹಾಗೂ ಮೀನುಗಾರರು ದೋಣಿಯನ್ನು ಕೊಂಡೊಯ್ದು, ಆತನನ್ನು ರಕ್ಷಣೆ ಮಾಡಿದ್ದಾರೆ. ದಡಕ್ಕೆ ಕರೆ ತಂದು ಕೂಡಲೇ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್ ಕೂಡ ಮಧ್ಯರಾತ್ರಿಯಲ್ಲಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಅವೈಜ್ಞಾನಿಕ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಕಳೆದ 15 ದಿನಗಳ ಹಿಂದಷ್ಟೆ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ಆಗಿತ್ತು. ಆ ಘಟನೆ ಮರೆಯುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ.

ಸದ್ಯ ಐಆರ್‌ಬಿ ಕಂಪನಿಯಿಂದ ನಿರ್ಮಾಣ ಮಾಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಎನ್​ಹೆಚ್​ಎಐಗೆ ಆದೇಶ ನೀಡಿದ್ದಾರೆ. ಸೇತುವೆಯ ಗುಣಮಟ್ಟದ ಬಗ್ಗೆ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ. ಸೇತುವೆ ಗುಣಮಟ್ಟದ ವರದಿ ಬರುವವರೆಗೂ ಹೊಸ ಸೇತುವೆಯಲ್ಲಿಯೂ ಸಂಚಾರವನ್ನು ನಿಷೇಧ ಮಾಡಲಾಗಿದೆ. ಇದರಿಂದ ಸದ್ಯ ಕಾರವಾರದಿಂದ ಗೋವಾಕ್ಕೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

Leave a Reply

Your email address will not be published. Required fields are marked *