ಬೆಳಗಾವಿ ಅಗ್ನಿ ದುರಂತ: ನಾಪತ್ತೆಯಾಗಿದ್ದ ಕಾರ್ಮಿಕ ಸುಟ್ಟು ಕರಕಲಾಗಿ ಪತ್ತೆ

ಬೆಳಗಾವಿ: ಬೆಳಗಾವಿಯ ಕಾರ್ಖಾನೆಯೊಂದರಲ್ಲಿ ನಡೆದ ಅರಸ ಭಾರಿ ಅಗ್ನಿ ದುರಂತದಲ್ಲಿ ನಾಪತ್ತೆಯಾಗಿದ್ದ ಕಾರ್ಮಿಕನ ದೇಹ ಸುಟ್ಟು ಕರಕಲಾಗಿ ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರೆದಿದೆ. ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ(20) ಮೃತ ಪಟ್ಟ ಕಾರ್ಮಿಕ.

ಸ್ನೇಹಂ ಟಿಕ್ಸೋ ಟೇಪ್ ಕಂಪನಿ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ಅಗ್ನಿ‌ ಅವಘಡ ಸಂಭವಿಸಿದಾಗ ಹಲವು ಕಾರ್ಮಿಕರು ಒಳಗಡೆ ಇದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಮಿಕರು ದಿಕ್ಕಾಪಾಲಾಗಿ ಹೊರಗೆ ಓಡಿ ಬಂದಿದ್ದರು. ಆದರೆ, ಯಲ್ಲಪ್ಪ ಲಿಫ್ಟ್​ನಲ್ಲೇ ಸಿಕ್ಕಿಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ನೇತೃತ್ವದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೃತ ಕಾರ್ಮಿಕನ ಮೃತದೇಹ ಪರಿಶೀಲನೆ ನಡೆಸಿದರು.

5 ಎಕರೆ ವಿಶಾಲ ಪ್ರದೇಶದ ಸುಮಾರು‌ 200 ಕೋಟಿ ಮೌಲ್ಯದ ಈ ಕಾರ್ಖಾನೆ ಮೂರು ಅಂತಸ್ತು ಹೊಂದಿದೆ. ಯಲ್ಲಪ್ಪ ಲಿಫ್ಟ್​ನಲ್ಲಿ ಇಳಿದು ಬರುವಾಗಲೇ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಜೊತೆಗಿದ್ದ ಕಾರ್ಮಿಕರು ತಿಳಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಎಷ್ಟು ಭೀಕರವಾಗಿತ್ತು ಎಂದರೆ ಆರು ಅಗ್ನಿಶಾಮಕ ವಾಹನಗಳು, ಹಲವು ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಬೆಂಕಿ ಹತೋಟಿಗೆ ಬರಲಿಲ್ಲ. ಬೆಳಗ್ಗೆ 10 ಗಂಟೆ ಸುಮಾರಿಗೆ ಕಟ್ಟಡದ ಗೋಡೆ, ಕಿಟಕಿಗಳನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಿ ಒಳಗೆ ನೀರು ಚಿಮ್ಮಿಸಿ ಬೆಂಕಿ‌ ನಂದಿಸಲು ಯತ್ನಿಸಲಾಯಿತು. ಈವರೆಗೂ ಕಾರ್ಖಾನೆ ಒಳಭಾಗದಲ್ಲಿ ಬೆಂಕಿ ಉರಿಯುತ್ತಲೇ ಇತ್ತು.‌ ಕಾರ್ಖಾನೆ ಸುತ್ತಮುತ್ತಲಿನ 10 ಕಿ.ಮೀ. ಪ್ರದೇಶದಲ್ಲಿ ದಟ್ಟ ಹೊಗೆ ಮತ್ತು ಪ್ಲಾಸ್ಟಿಕ್ ಸುಟ್ಟ ಘಾಟು ವಾಸನೆಯಿಂದ ಜನ ಹೈರಾಣಾಗಬೇಕಾಯಿತು. ಪೊಲೀಸರು, ಅಗ್ನಿಶಾಮ ಅಧಿಕಾರಿಗಳು ಮಾಸ್ಕ್ ಧರಿಸಿಯೇ ಕಾರ್ಯಾಚರಣೆ ಮುಂದುವರಿಸಿದರು.

Leave a Reply

Your email address will not be published. Required fields are marked *