ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದಾರೆ. ಇದರ ವಿರುದ್ಧ ಪ್ರತಿಪಕ್ಷಗಳು ಹೋರಾಡಬೇಕಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಂಸತ್ತಿನಲ್ಲಿ ಗಂಭೀರ ಆರೋಪ ಮಾಡಿದರು.
ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ವೇಳೆ ಅಖಿಲೇಶ್ ಯಾದವ್ ಈ ರೀತಿಯ ಆರೋಪ ಮಾಡಿದರು. ನಮ್ಮ ವಾಕ್ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತಿದೆ. ನೀವು (ಸ್ಪೀಕರ್) ಪ್ರಜಾಪ್ರಭುತ್ವದ ತೀರ್ಪುಗಾರರು. ಆದರೆ ಪಕ್ಷಪಾತ ಧೋರಣೆ ಅನುಸರಿಸುವುದು ಸರಿಯೇ ಎಂದರು.
ಅಖಿಲೇಶ್ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತ್ಯುತ್ತರ ನೀಡಿ, ಇಂತಹ ಆರೋಪ ಸಭಾಧ್ಯಕ್ಷರಿಗೆ ಮಾಡಿದ ಅವಮಾನವಾಗಿದೆ. ಸ್ಪೀಕರ್ ಇಡೀ ಸದನಕ್ಕೆ ಸೇರಿದವರಾಗಿದ್ದು, ಈ ರೀತಿ ಮಾತನಾಡುವುದು ಸರಿಯಲ್ಲ. ನೀವು ಸಭಾಧ್ಯಕ್ಷರ ಹಕ್ಕು ಕಾಪಾಡುವವರಲ್ಲವೇ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಸಹ ಪ್ರತಿಕ್ರಿಯಿಸಿ, ನನ್ನ ಬಗ್ಗೆ ಅಥವಾ ಸದನದ ಇತರ ಸದಸ್ಯರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಸ್ಪೀಕರ್ ಸ್ಥಾನದ ಬಗ್ಗೆ ವೈಯಕ್ತಿಕ ಟೀಕೆ ಮಾಡಬಾರದು ಎಂದು ಎಚ್ಚರಿಸಿದರು.
‘ಇಂಡಿಯಾ’ ಒಕ್ಕೂಟದ ಪಕ್ಷಗಳ ವಿರೋಧದ ನಡುವೆಯೇ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ತಮ್ಮ ಸರ್ಕಾರ ಮಂಡಿಸಿದ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ಧರ್ಮದ ಆಧಾರದ ಮೇಲೆ ನ್ಯಾಯವಿಲ್ಲ ಎಂದರು.