ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ ಘೋಷಣೆ ಮಾಡಿದೆ. ಆಗಸ್ಟ್ 27ರಂದು ಪರೀಕ್ಷೆಗಳನ್ನು ವಿವಿಧ ಕೇಂದ್ರಗಳಲ್ಲಿ ನಡೆಸಲು ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಈಗ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ? ಎಂದು ಮಾಹಿತಿ ನೀಡಲಾಗಿದೆ.
ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆ (ಕೆಎಎಸ್) ನೇಮಕಾತಿ ಪ್ರಕ್ರಿಯೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಪೂರ್ವಭಾವಿ ಪರೀಕ್ಷೆಯ ಹಂತಕ್ಕೆ ನೇಮಕಾತಿ ತಲುಪಿದೆ. 384 ಹುದ್ದೆಗಳಿಗೆ ಒಟ್ಟು 2,10,910 ಅರ್ಜಿಗಳು ಸಲ್ಲಿಕೆಯಾಗಿವೆ. ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಿಗದಿತ ಕೇಂದ್ರಗಳಲ್ಲಿ ನಡೆಯಲಿದೆ.
ಹಾಲ್ ಟಿಕೆಟ್ ಡೌನ್ಲೋಡ್: ಕೆಪಿಎಸ್ಸಿ ಕಾರ್ಯದರ್ಶಿಗಳು ಈಗ ಪತ್ರಿಕಾ ಪ್ರಕಟಣೆ ಮೂಲಕ ಪರೀಕ್ಷೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ? ಎಂದು ಮಾಹಿತಿ ನೀಡಿದ್ದಾರೆ. ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 25-08-2024ರಂದು ನಡೆಸಲು ನಿಗದಿಪಡಿಸಲಾಗಿತ್ತು.
ಸದರಿ ದಿನದಂದು ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಲಾಗಿ ಸದರಿ ಪೂರ್ವಭಾವಿ ಪರೀಕ್ಷೆಗೆ ಆಯೋಗವು ಎಲ್ಲಾ ಪರೀಕ್ಷಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶ ನೀಡದೆ, ಬೇರೆ ಪರೀಕ್ಷೆಗಳೊಂದಿಗೆ Overlap ಆಗದಂತೆ ಅಲ್ಪಕಾಲ ಮುಂದೂಡಲು ನಿರ್ಧರಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ 27-08-2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಮರುನಿಗದಿಪಡಿಸಲು ಆಯೋಗವು ತೀರ್ಮಾನಿಸಿದೆ. ಅಭ್ಯರ್ಥಿಗಳು ದಿನಾಂಕ 15-08-2024ರ ನಂತರ ಪ್ರವೇಶ ಪತ್ರವನ್ನು ಆಯೋಗದ ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಉಳಿದಂತೆ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ಕೆಪಿಎಸ್ಸಿ ವೆಬ್ಸೈಟ್ಗೆ ಭೇಟಿ ನೀಡಿ.
ದಿನಾಂಕ 27-08-2024 ಕಾರ್ಯ ನಿರ್ವಹಣಾ (Working day) ದಿನವಾಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ರಾಜ್ಯದ ಎಲ್ಲಾ ಜಿಲ್ಲೆಗಳ ಪರೀಕ್ಷಾ ಉಪಕೇಂದ್ರಗಳಿಗೆ ವಿಶೇಷ/ ಸಾರ್ವತ್ರಿಕ ರಜೆಯನ್ನು ಘೋಷಿಸಲು ಹಾಗೂ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಪರೀಕ್ಷೆ ದಿನಾಂಕವನ್ನು ಬದಲಿಸಲು ಆಗ್ರಹ: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ದಿನಾಂಕ ಬದಲಾವಣೆ ಮಾಡಬೇಕು ಎಂದು ಬಿಜೆಪಿ ನಾಯಕ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಗೆಜೆಡೆಟ್ ಪ್ರೊಬೆಷನರಿ ಹುದ್ದೆ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷಾರ್ಥಿಗಳಿಗೆ ಅನ್ಯಾಯ, ಏಕಪಕ್ಷೀಯ ಧೋರಣೆ, ಆಯೋಗದ ಕೆಲ ಪಟ್ಟಭದ್ರರ ಒತ್ತಡಕ್ಕೆ ಮಣಿದು ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಅನೇಕ ಪರೀಕ್ಷಾರ್ಥಿಗಳು, ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುವುದರಿಂದ ಈ ಹಿಂದೆ ನಾನು ಹೇಳಿದಂತೆ ಕಷ್ಟಪಟ್ಟು, ಉದ್ಯೋಗದಲ್ಲಿದ್ದುಕೊಂಡು ಓದಿದ ಅಭ್ಯರ್ಥಿಗಳಿಗೆ ಅನ್ಯಾಯಾಗುತ್ತದೆ’ ಎಂದು ಹೇಳಿದ್ದಾರೆ.
‘2017-18 ನೇ ಬ್ಯಾಚಿನ ಅಭ್ಯರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಕೇವಲು ಒಂದು ತಿಂಗಳು ಮಾತ್ರ ಕೊಟ್ಟಿರುವುದು ತರವಲ್ಲ. ಈ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಪಠ್ಯಕ್ರಮ ವ್ಯಾಪ್ತಿ ಹೆಚ್ಚಾಗಿದ್ದು, ಪಠ್ಯಕ್ರಮದಲ್ಲಿರುವ ವಿಷಯಗಳ ಬಗ್ಗೆ ಸುಧೀರ್ಘ ಅಧ್ಯಯನ ಮಾಡಿದರಷ್ಟೇ ಯಶಸ್ಸು ಸಿಗುತ್ತದೆ. ಪಠ್ಯಕ್ರಮದ ಮನನ, ಪುನರ್ ಮನನ ಮಾಡುವದಕ್ಕೆ ಕಾಲಾವಕಾಶ ಬೇಕಾಗಿರುವುದು ಸಹಜ’ ಎಂದು ಟ್ವೀಟ್ ಮಾಡಿದ್ದಾರೆ.
‘ಪ್ರಶ್ನೆ ಪತ್ರಿಕೆ ಈಗಾಗಲೇ ಮುದ್ರಣ ಆಗಿದೆ, ಪರೀಕ್ಷೆಯನ್ನು ಬೇಗ ಮುಗಿಸಬೇಕು ಎಂಬ ತಾಂತ್ರಿಕ ಕಾರಣಗಳನ್ನೊಡ್ಡುವುದು ತಪ್ಪು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಲೋಕಸೇವಾ ಆಯೋಗದ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಮೇಲಾಗಿ, ವಾರದ ದಿನ ಪರೀಕ್ಷೆ ನಿಗದಿ ಮಾಡುವುದರಿಂದ ಐ.ಟಿ., ಶಿಕ್ಷಕರು, ಸರ್ಕಾರಿ ನೌಕರರು, ಇತರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ರಜೆ ಸಿಗುವುದು ಕಷ್ಟವಾಗುತ್ತದೆ. ಭಾನುವಾರದಂದೇ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವುದು ರೂಡಿಯಲ್ಲಿದೆ. ಇದೆ ವ್ಯವಸ್ಥೆಯನ್ನು ಮುಂದುವರೆಸುವುದನ್ನು ಬಿಟ್ಟು ಸರ್ಕಾರ ಹಾಗೂ ಲೋಕಸೇವಾ ಆಯೋಗ ಈ ಪರೀಕ್ಷೆಯನ್ನು ವಾರದ ದಿನ ನಿಗದಿ ಮಾಡಿರುವುದು ಖಂಡನೀಯ ಹಾಗೂ ತರ್ಕರಹಿತವಾಗಿದೆ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇದೆ ಚಿಂತೆಯಲ್ಲಿದ್ದಾರೆ. ಸರ್ಕಾರ ತನ್ನ ನಿಲುವನ್ನು ಬದಲಿಸಿ ಸದರಿ ಪರೀಕ್ಷೆಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಗೆ ಬದಲಿಸಿ ಆದೇಶ ಹೊರಡಿಸಲಿ’ ಎಂದು ಒತ್ತಾಯಿಸಿದ್ದಾರೆ.