ನವದೆಹಲಿ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ (Anna bhagya) ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಇನ್ನು ಮುಂದೆ ಎಣ್ಣೆ, ಬೇಳೆ, ಸಕ್ಕರೆ, ಇತರೆ ಆಹಾರ ಪದಾರ್ಥಗಳನ್ನು ನೀಡುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ ರಾಜ್ಯ ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 93 ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಜೊತೆಗೆ ಇತರೆ ಅಗತ್ಯ ಆಹಾರ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಕ್ಕಿ ಬದಲಿಗೆ ಎಣ್ಣೆ, ಬೇಳೆ, ಸಕ್ಕರೆ, ಇತರೆ ಆಹಾರ ಪದಾರ್ಥಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗಳಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಈಗ 5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿ ಹಣ ನೀಡಲಾಗುತ್ತಿದೆ.