ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿಂದು 10 ಸಚಿವರೊಂದಿಗೆ ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದು ಕೇವಲ ರಾಜಕೀಯ ಪಿತೂರಿ, ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ, ಅವರ ಜೊತೆ ನಾವಿದ್ದೇವೆ, ಕಾನೂನು ಹೋರಾಟ ಮೂಲಕ ಎದುರಿಸುತ್ತೇವೆ ಎಂದರು.
78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಮಾಡಿದ್ದೇವೆ. ರಾಜ್ಯಪಾಲರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ಮಾರಕವಾದ ಪತ್ರ ಕಳುಹಿಸಿದ್ದಾರೆ. ರಾಜ್ಯಪಾಲರ 26.7.2024ರ ನೋಟಿಸ್ ಸಂಬಂಧ ಏಪ್ರಿಲ್ 1ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ದೂರಿನಲ್ಲಿ ತಿರುಳು ಇಲ್ಲ. ಸಂವಿಧಾನದ ಅಂಶಗಳನ್ನು ತಿಳಿ ತಿಳಿಯಾಗಿ ಹೇಳಿದ್ದೇವೆ. ಇದು ರಾಜಕೀಯ ಪಿತೂರಿ. ಮುಡಾ ಪ್ರಕರಣದಲ್ಲಿ ಯಾವುದೇ ಲೋಪದೋಷ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದರು.
ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡುತ್ತಿದ್ದಾರೆ. ರಾಜಕಾರಣ ಮಾಡುತ್ತಿದ್ದಾರೆ. ಜೋಶಿ, ಕುಮಾರಸ್ವಾಮಿ ಈ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಪೂರ್ವಾನುಮತಿ ನೀಡಲಾಗಿದೆ. ಇಡೀ ಸಂಪುಟ ಸಚಿವರು ಸಿಎಂ ಬೆನ್ನಿಗೆ ನಿಂತಿದೆ. ಪಕ್ಷವೂ ಸಿಎಂ ಬೆನ್ನಿಗೆ ನಿಂತಿದೆ. ಯಾವುದೇ ಪ್ರಕರಣ ಇಲ್ಲ. ಅದರ ಮೇಲೆ ಕೇಸ್ ಮಾಡಿದ್ದಾರೆ. ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ಹೋರಾಟ ಮಾಡುತ್ತೇವೆ. ಈ ಪ್ರಾಸಿಕ್ಯೂಷನ್ ಕಾನೂನು ವಿರುದ್ಧವಾಗಿದೆ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.