ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಲಿತ ನರ್ಸ್ ಮೇಲೆ ವೈದ್ಯನೋರ್ವ ಅತ್ಯಾಚಾರವೆಸಗಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಪ್ರಕಾರ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.
20 ವರ್ಷದ ಸಂತ್ರಸ್ತೆ ಶನಿವಾರ ರಾತ್ರಿ 7 ಗಂಟೆಗೆ ಕರ್ತವ್ಯಕ್ಕಾಗಿ ಆಸ್ಪತ್ರೆಗೆ ಹೋಗಿದ್ದಳು. ಕಳೆದ ಏಳು ತಿಂಗಳಿಂದ ಅಲ್ಲಿ ಆಕೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತಡರಾತ್ರಿ ಕೊಠಡಿಯಲ್ಲಿ ಡಾ.ಶಹನವಾಜ್ ಭೇಟಿಯಾಗುವಂತೆ ಮತ್ತೊಬ್ಬ ನರ್ಸ್ ಮೆಹನಾಜ್ ಸಂತ್ರಸ್ತೆಗೆ ಹೇಳಿದ್ದಾರೆ.
ಆಕೆ ನಿರಾಕರಿಸಿದಾಗ, ಮೆಹನಾಜ್ ಮತ್ತು ವಾರ್ಡ್ ಬಾಯ್ ಜುನೈದ್ ಆಕೆಯನ್ನು ಬಲವಂತವಾಗಿ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿರುವ ಕೋಣೆಗೆ ಕರೆದೊಯ್ದು ಹೊರಗಿನಿಂದ ಬೀಗ ಹಾಕಿದ್ದರು ಎಂದು ಮೀನಾ ಹೇಳಿದ್ದಾರೆ.
ಡಾ.ಶಹನವಾಜ್ ಕೊಠಡಿ ಪ್ರವೇಶಿಸಿದ ನಂತರ ಆಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರವೆಸಗಿದ್ದಾನೆ. ಆಕೆಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿರುವುದಾಗಿ ಅವರು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ಕುಲದೀಪ್ ಸಿಂಗ್ ಅವರ ಸೂಚನೆಯ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರೆ, ಭಾನುವಾರ ಸಂಜೆ ಆರೋಗ್ಯ ಇಲಾಖೆಯ ತಂಡವು ತಪಾಸಣೆ ನಡೆಸಿದ ನಂತರ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.