ಮಂಗಳೂರು/ ಬೆಳ್ತಂಗಡಿ: ಮುಡಾದಲ್ಲಿ ನಡೆಯಲಾಗಿದೆ ಎಂಬ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರಿದ್ದು, ರಾಜಕೀಯ ಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಇನ್ನು ರಾಜ್ಯಪಾಲರು ಸಂವಿಧಾನ ವಿರೋಧಿ ಕ್ರಮ ಅನುಸರಿಸಿದ್ದಾರೆ, ಕೇಂದ್ರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯದಾದ್ಯಂತ ಇಂದು (ಆಗಸ್ಟ್ 19 ರಂದು) ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ ನಾಲಿಗೆ ಹರಿಬಿಟ್ಟ ಐವಾನ್ ಡಿಸೋಜಾ!
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮುಖಂಡ ಐವಾನ್ ಡಿಸೋಜಾ, ರಾಜ್ಯಪಾಲರನ್ನು ವಾಪಾಸ್ ಕರೆಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ.
ಬಾಂಗ್ಲಾದೇಶದ ಪ್ರಧಾನಿಗೆ ಬಂದ ಸ್ಥಿತಿ ಇಲ್ಲಿನ ರಾಜ್ಯಪಾಲರಿಗೆ ಬರಬಹುದು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಯ ಬೆನ್ನಲ್ಲೆ ಇನ್ನೋರ್ವ ಕಾಂಗ್ರೆಸ್ ಮುಖಂಡ ಇದೇ ಹೇಳಿಕೆಯನ್ನು ಪುನರ್ ಉಚ್ಛರಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಬಾಂಗ್ಲಾದ ಪ್ರಧಾನಿಗೆ ಬಂದ ಸ್ಥಿತಿ ಮೋದಿಗೆ ಬರಲಿದೆ!
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಯುವ ಮುಖಂಡರಾಗಿರುವ ರಕ್ಷಿತ್ ಶಿವರಾಮ್ ಅವರು, ಇಂದು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಂಗ್ಲಾ ಮಾದರಿಯ ಹಿಂಸಾಚಾರದ ಎಚ್ಚರಿಕೆ ನೀಡಿದ್ದಾರೆ.
ಹಾಸಿಗೆ ದಿಂಬು ಹಿಡಿದು ಓಡುವ ಪರಿಸ್ಥಿತಿ ಬರಲಿದೆ!
ಹೌದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ ಅವರ ಸಂಬಂಧಿಯೂ ಆಗಿರುವ ರಕ್ಷಿತ್ ಶಿವರಾಂ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಂಗ್ಲಾ ಹಿಂಸಾಚಾರದ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾನಿ ಮನೆಯನ್ನು ಯಾವ ರೀತಿ ಮಾಡಲಾಯಿತೋ ಅದೇ ಪರಿಸ್ಥಿತಿ ನರೇಂದ್ರ ಮೋದಿಗೆ ಬರಲಿದೆ. ಹಾಸಿಗೆ, ದಿಂಬು ಹಿಡಿದುಕೊಂಡು ಓಡಬೇಕಾದ ಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾ ದೇಶಕ್ಕೆ ಬಂದಂಥಹ ಪರಿಸ್ಥಿತಿ ದೇಶದಲ್ಲಿ ಅತೀ ಶೀಘ್ರದಲ್ಲಿ ಬರಲಿದೆವ ಎಂದು ಹೇಳುವ ಮೂಲಕ ದೇಶದಲ್ಲಿ ಬಾಂಗ್ಲಾ ಮಾದಿಯ ಹಿಂಸಾಚಾರ ನಡೆಯಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಈ ವಿವಾದಿತ ಹೇಳಿಕೆ ನೀಡಿದ್ದಾರೆ.