“ಅತ್ಯಾಚಾರಿಗಳಿಗೆ ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟರೂ ಸಮಾಧಾನ ಆಗಲ್ಲ” : ಧ್ರುವ ಸರ್ಜಾ

ಕೊಲ್ಕತ್ತಾದಲ್ಲಿ ವೈದ್ಯೆ ಅತ್ಯಾಚಾರ ಮತ್ತು ಕೊಲೆಗೆ ನ್ಯಾಯ ಸಿಗುವಂತೆ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ‘ಮಾರ್ಟಿನ್’ ಸಿನಿಮಾದ ನಟ ಧ್ರುವ ಸರ್ಜಾ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಕ್ರೂರಿಗೆ ಶಿಕ್ಷೆ ಆಗಲೇಬೇಕು ಅಂತ ವಿಡಿಯೋ ಆಗ್ರಹಿಸಿದ್ದಾರೆ.

ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದ ಪ್ರಮೋಷನ್‌ನಲ್ಲಿ ಇದ್ದಾರೆ. ಅದರಿಂದ ಬಿಡುವು ಮಾಡಿಕೊಂಡು ವಿಡಿಯೋ ಮಾಡಿದ್ದು, ಕೊಲ್ಕತ್ತಾದ ವೈದ್ಯರ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಕೃತ್ಯವನ್ನು ಖಂಡಿಸಿದ್ದಾರೆ. “ಈ ವಿಡಿಯೋ ಮಾಡುತ್ತಿರುವ ಉದ್ದೇಶ. 2024, ಆಗಸ್ಟ್ 14ನೇ ತಾರೀಕು, ಇಂಡಿಯನ್ ಸ್ಟ್ಯಾಟಿಸ್ಟಿಕ್ ಪ್ರಕಾರ ಪ್ರತಿ 16 ನಿಮಿಷಕ್ಕೊಂದು ಹೆಣ್ಣು ಮಗು ಅತ್ಯಾಚಾರ ಆಗುತ್ತಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ ಅಂತಾರೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಆ ಭಗವಂತನೇ ಇರಲ್ವಂತೆ. ನಮ್ಮದು ರಾಮ ಜನ್ಮಭೂಮಿ ಅಂತ ಕರೆಯುತ್ತೇವೆ. ಕೆಲವು ಬಾಸ್ಟರ್ಡ್ಸ್ ಮಾಡುತ್ತಿರುವ ಕೃತ್ಯದಿಂದ ನಿಜವಾಗಲೂ ನಮ್ಮ ಭಾರತಕ್ಕೆನೇ ಕೆಟ್ಟ ಹೆಸರು.” ಎಂದಿದ್ದಾರೆ ಧ್ರುವ ಸರ್ಜಾ

ಇದೇ ವಿಡಿಯೋದಲ್ಲಿ ಹೆಣ್ಣು ಮಕ್ಕಳನ್ನು ಹೀಗೆ ಇರಬೇಕು ಅಂತ ಹೇಳುವುದಕ್ಕಿಂತ ಗಂಡು ಮಕ್ಕಳಿಗೆ ಮೂರು ಅಂಶಗಳನ್ನು ಪ್ರತಿಯೊಂದು ಮನೆಯಲ್ಲೂ ಹೇಳಿಕೊಡಬೇಕು ಎಂದಿದ್ದಾರೆ. “ಹೆಣ್ಣು ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಹೀಗೆ ಬಟ್ಟೆ ಹಾಕಿಕೊಳ್ಳಬೇಕು. ಇದನ್ನೇ ಮಾಡಬೇಕು. ಅದನ್ನೇ ಮಾಡಬೇಕು ಅಂತ ಹೇಳುವುದಕ್ಕಿಂತ ಪ್ರತಿಯೊಬ್ಬರ ಮನೆಯಲ್ಲಿಯೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಹೇಳಿಕೊಡಬೇಕು. ಹೇಗೆ ಹೆಣ್ಣು ಮಕ್ಕಳನ್ನು ಪ್ರೊಟೆಕ್ಟ್ ಮಾಡಬೇಕು, ಹೇಗೆ ಸಪೋರ್ಟ್ ಮಾಡುವುದು, ಹೇಗೆ ರೆಸ್ಪೆಕ್ಟ್ ಮಾಡಬೇಕು ಅಂತ ಪ್ರತಿಯೊಬ್ಬರ ಮನೆಯಲ್ಲಿ ಹೇಳಿಕೊಡಲೇ ಬೇಕು.” ಎಂದು ಧ್ರುವ ಸರ್ಜ ಹೇಳಿದ್ದಾರೆ.

ಅತ್ಯಾಚಾರ ಮಾಡಿದವರನ್ನು ನಡುರಸ್ತೆಯಲ್ಲಿ ನಿಂತು ಸುಟ್ಟಾಕಿದರೂ ಸಮಾಧಾನ ಆಗುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. “ಇಂತಹ ಅತ್ಯಾಚಾರಿಗಳಿಗೆ ಅವರು ಸಿಕ್ಕಿ ಕಾನೂನು ರೀತಿ ಶಿಕ್ಷೆ ಆಗಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಅವರಿಗೆ ಯಾವುದೇ ರೀತಿ ಶಿಕ್ಷೆ ಕೊಟ್ಟರೂ ಸಮಾಧಾನ ಅನ್ನೋದು ಆಗುವುದಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟಾಕಿದರೂ ಕೂಡ ಸಮಾಧಾನ ಆಗುವುದಿಲ್ಲ. ಇಂತಹ ಅತ್ಯಾಚಾರಿಗಳಿಗೆ ಆ ಭಗವಂತ ಇವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ.” ಎಂದಿದ್ದಾರೆ

ಹಾಗೇ “ಈ ವಿಡಿಯೋ ಮಾಡುತ್ತಿರುವ ಉದ್ದೇಶ ಅಂದರೆ, ನನಗೂ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಯಾರದ್ದೋ ಮನೆಗೆ ಅನ್ಯಾಯ ಆಗಿದೆ ಅಂದಾಗ, ನಿಜವಾಗಲೂ ಅವರ ಜೊತೆ ಇರಬೇಕು. ದಯವಿಟ್ಟು ಎಲ್ಲರೂ ಧ್ವನಿ ಎತ್ತಿ. ನ್ಯಾಯವನ್ನು ಕೇಳೋಣ. ಇದು ಭಾರತವನ್ನು ಬದಲಾಯಿಸುವ ಸಮಯ.” ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಡಿಯೋ ಮೂಲಕ ಹೇಳಿದ್ದಾರೆ.

Leave a Reply

Your email address will not be published. Required fields are marked *