ಕಾರವಾರ: ಜಿಲ್ಲೆಯಲ್ಲಿ ಇತ್ತೀಚಿಗೆ ಶಿರೂರಿನಲ್ಲಿ ಉಂಟಾದ ಭೀಕರ ಗುಡ್ಡ ಕುಸಿತ ಘಟನೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಗದ್ದೆಯ ಜನವಸತಿ ಪ್ರದೇಶದ ಸಮೀಪದ ಗುಡ್ಡದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ಇದು ಸ್ಥಳೀಯರ ನಿದ್ದೆಗೆಡಿಸಿದೆ.
ಕುರಿಗದ್ದೆ ಗ್ರಾಮದ ಕೃಷ್ಣಪ್ಪ ರಾಮಯ್ಯ ಪಟಗಾರ ಎಂಬುವರ ಮನೆ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧ ಕಿಲೋಮೀಟರ್ ಆಗುವಷ್ಟು ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಬಾಯಿ ತೆರೆದುಕೊಂಡಿದೆ. ಅಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಯಾವುದೇ ಕ್ಷಣದಲ್ಲಾದರು ಸಹ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಶುಕ್ರವಾರ ರಾತ್ರಿಯಿಂದ ಮಳೆ ಸಹ ಜೋರಾಗಿದ್ದು ಗುಡ್ಡ ಕುಸಿಯುವ ಭಯ ಶುರುವಾಗಿದೆ. ಈಗಾಗಲೇ ಗುಡ್ಡ ಬಿರುಕು ಬಿಟ್ಟಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಮನೆಯಲ್ಲಿ ವಾಸ್ತವ್ಯ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.