2026 ರ ವೇಳೆಗೆ ನಕ್ಸಲ್​ವಾದಕ್ಕೆ ತಿಲಾಂಜಲಿ – ಅಮಿತ್​ ಶಾ | Amit Shah on extremism

ರಾಯ್​ಪುರ (ಛತ್ತೀಸ್​ಗಢ): ನಕ್ಸಲ್​ವಾದವನ್ನು ಬೇರು ಸಮೇತ ಕಿತ್ತೆಸೆಯಲು ಕೇಂದ್ರ ಸರ್ಕಾರ ಅವಿರತವಾಗಿ ಶ್ರಮಿಸಿದೆ. 2026 ರ ಮಾರ್ಚ್​ ವೇಳೆಗೆ ಎಡಪಂಥೀಯ ಉಗ್ರವಾದ ದೇಶದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಹೇಳಿದರು.

ನಕ್ಸಲ್​ವಾದವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಇದರ ವಿರುದ್ಧದ ಹೋರಾಟ ಅವಿರತವಾಗಿ ಸಾಗಿದೆ. ನಕ್ಸಲಿಸಂ ವಿರುದ್ಧದ ಹೋರಾಟವು ಕೊನೆಯ ಹಂತದಲ್ಲಿದೆ. ಹೀಗಾಗಿ ಮುಂದಿನ ವರ್ಷದಲ್ಲಿ ಎಲ್ಲ ರಾಜ್ಯಗಳಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ರಾಯ್​ಪುರದಲ್ಲಿ ಶನಿವಾರ ನಡೆದ ನಕ್ಸಲ್ ಪೀಡಿತ ರಾಜ್ಯಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎಡಪಂಥೀಯ ಉಗ್ರವಾದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಇದರಿಂದ ಸುಮಾರು 17 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2014 ರಿಂದ 2024 ರ ನಡುವೆ 14 ಪ್ರಮುಖ ನಕ್ಸಲ್​ ಕಮಾಂಡರ್‌ಗಳು ಹತರಾಗಿದ್ದಾರೆ ಎಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ 16 ಸಾವಿರಕ್ಕೂ ಹೆಚ್ಚು ನಕ್ಸಲ್ ದಾಳಿಗಳು ನಡೆದಿವೆ. ಆದರೂ, 2014ರಿಂದ ನಕ್ಸಲೀಯರ ದಾಳಿಗಳು ಶೇ.53ರಷ್ಟು ಇಳಿಕೆಯಾಗಿವೆ. ಮಾವೋವಾದಿಗಳ ಸಾವಿನ ಸಂಖ್ಯೆ ಶೇಕಡಾ 70ರಷ್ಟು ಕಡಿಮೆಯಾಗಿದೆ. 2010 ಕ್ಕೆ ಹೋಲಿಸಿದರೆ ನಕ್ಸಲ್ ದಾಳಿಗಳಲ್ಲಿ ನಾಗರಿಕ ಸಾವು-ನೋವುಗಳು 69 ಪ್ರತಿಶತದಷ್ಟು ಕಡಿಮೆಯಾಗಿವೆ ಎಂದು ಅಂಕಿಅಂಶ ಸಹಿತಿ ಅಮಿತ್​ ಶಾ ವಿವರಿಸಿದರು.

ಕಾಶ್ಮೀರದಲ್ಲಿ ಒಪ್ಪಂದ ಮಾಡಿಕೊಂಡಿಲ್ಲ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. 370 ನೇ ವಿಧಿಯನ್ನು ರದ್ದು ಮಾಡಲಾಗಿದೆ. ಅದನ್ನು ಮತ್ತೆ ಮರುಸ್ಥಾಪಿಸುವ ಮಾತೇ ಇಲ್ಲ ಎಂದು ಅಮಿತ್​ ಶಾ ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಮೈತ್ರಿಯನ್ನು ಲೇವಡಿ ಮಾಡಿದ ಕೇಂದ್ರ ಸಚಿವರು, ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ತರಬೇಕೆಂಬ ನ್ಯಾಷನಲ್ ಕಾನ್ಫರೆನ್ಸ್ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ?. 370 ನೇ ವಿಧಿ ಹಿಂಪಡೆಯುವ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ?. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ನೀಡಲಾದ ಮೀಸಲಾತಿಯನ್ನು ರದ್ದುಗೊಳಿಸುವ ಕಲ್ಪನೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ? ಎಂದು ಪ್ರಶ್ನಿಸಿದರು.

ಕಾಶ್ಮೀರದಲ್ಲಿ ಚುನಾವಣೆಗೂ ಮೊದಲೇ ಇಂಡಿಯಾ ಕೂಟದ ಪಕ್ಷಗಳು ಒಂದಾಗಿವೆ. ಬಿಜೆಪಿಗೆ ಹೆದರಿ ಈ ಮೈತ್ರಿ ಮಾಡಿಕೊಳ್ಳಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನಮ್ಮ ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *