ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಆಘಾತಕಾರಿ ಅಂಶಗಳನ್ನೊಳಗೊಂಡ ವರದಿ ಹೊರಬಿದ್ದ ಬೆನ್ನಲ್ಲೇ ನಟಿಮಣಿಯರು ಹೇಳಿಕೆ ಕೊಡಲು ಶುರು ಮಾಡಿದ್ದಾರೆ. ಚಿತ್ರರಂಗದ ಕರಾಳ ಮುಖದ ವಿರುದ್ಧ ಸೆಲೆಬ್ರಿಟಿಗಳೂ ಸೇರಿದಂತೆ ಜನಸಾಮಾನ್ಯರು ಛೀಮಾರಿ ಹಾಕುತ್ತಿದ್ದಾರೆ. ನಿನ್ನೆಯಷ್ಟೇ ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಸೂಪರ್ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಆಡಳಿತ ಮಂಡಳಿಯ 17 ಜನರು ರಾಜೀನಾಮೆ ನೀಡಿದ್ದರು. ಇದೀಗ ಖ್ಯಾತ ನಟನ ವಿರುದ್ಧ ರೇಪ್ ಕೇಸ್ ದಾಖಲಾಗಿದೆ.
ಮಲಯಾಳಂ ನಟ ಸಿದ್ದಿಕ್ ವಿರುದ್ಧ ಈ ಅತ್ಯಾಚಾರ ಪ್ರಕರಣ ದಾಖಲಾಗಿದೆ. 2016ರಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ನಟಿಯೊಬ್ಬರ ಆರೋಪದ ಮೇರೆಗೆ ನಟನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ನಟ ಸಿದ್ದಿಕ್ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2016ರಲ್ಲಿ ಅಪರಾಧ ನಡೆದಿರುವ ಕಾರಣ ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಅಂಶಗಳು ಬಹಿರಂಗಗೊಂಡ ನಂತರ ವಿವಿಧ ನಿರ್ದೇಶಕರು ಮತ್ತು ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿವೆ. ಆರೋಪಗಳ ಬೆನ್ನಲ್ಲೇ, ಚಿತ್ರರಂಗದಲ್ಲಿನ ಗಣ್ಯರ ವಿರುದ್ಧ ದಾಖಲಾದ ಎರಡನೇ ಎಫ್‌ಐಆರ್ ಇದಾಗಿದೆ. 2009ರಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ನಿರ್ದೇಶಕ ರಂಜಿತ್ ವಿರುದ್ಧ ಐಪಿಸಿ ಸೆಕ್ಷನ್ 354ರಡಿ ಕೇಸ್ ರಿಜಿಸ್ಟರ್ ಆಗಿದ್ದು, ಇದು ಮೊದಲ ಪ್ರಕರಣವಾಗಿದೆ. 2009ರಲ್ಲಿ ‘ಪಲೇರಿ ಮಾಣಿಕ್ಯಂ’ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ ನಿರ್ದೇಶಕರು ತಮ್ಮನ್ನು ಲೈಂಗಿಕವಾಗಿ, ಅನುಚಿತವಾಗಿ ಸ್ಪರ್ಶಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಗಳ ಬೆನ್ನಲ್ಲೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದಿಕ್ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.