ನಿವೃತ್ತಿ ವೇತನ ಹೆಚ್ಚಳ : ಪಿಂಚಣಿದಾರರಿಗೂ ಗುಡ್ ನ್ಯೂಸ್

Vidhanasoudha, Bangalore, Karnataka

ಬೆಂಗಳೂರು: 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಆರ್ಥಿಕ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಹೊಸ ಆದೇಶದ ಪ್ರಕಾರ ನಿವೃತ್ತ ಸರ್ಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು 8,500 ರೂಪಾಯಿಗಳಿಂದ 13,500 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಪಿಂಚಣಿಗೆ ಅರ್ಹರಾದ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಪೆನ್ಶನ್​​ನಲ್ಲಿ 5 ಸಾವಿರ ರೂಪಾಯಿ ಏರಿಕೆಯಾಗಲಿದೆ.

ಕನಿಷ್ಠ ಪಿಂಚಣಿ ಜೊತೆಗೆ ರಾಜ್ಯ ಸರ್ಕಾರವು ಗರಿಷ್ಠ ಪಿಂಚಣಿಗೂ ಮಿತಿಯನ್ನ ನಿಗದಿಪಡಿಸಿದೆ. ಯಾವುದೇ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿಯು 1 ಲಕ್ಷದ 20 ಸಾವಿರದ 600 ರೂ.ಗಳಿಗೆ ಮೀರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲ್ಲಿಯ ತನಕ ಗರಿಷ್ಠ ನಿವೃತ್ತಿ ವೇತನ 75,300 ರೂ.ಗಳಾಗಿತ್ತು. ಗರಿಷ್ಠ ಮಿತಿಯಲ್ಲಿ 45,300 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.

ಕುಟುಂಬ ವೇತನದಲ್ಲಿ ಏನುಬದಲಾವಣೆ?: ರಾಜ್ಯ ಸರ್ಕಾರಿ ನೌಕರರ ಅವಲಂಬಿತರ ಕುಟುಂಬದವರ ಪಿಂಚಣಿಯನ್ನೂ ಸಹ ಪರಿಷ್ಕರಣೆ ಮಾಡಲಾಗಿದೆ. ಕನಿಷ್ಠ ನಿವೃತ್ತಿ ವೇತನವನ್ನು 13,500 ರೂ.ಗಳಿಗೆ ನಿಗದಿಗೊಳಿಸಲಾಗಿದ್ದು, ಹಿಂದಿನ ಪಿಂಚಣಿಗಿಂತ 5 ಸಾವಿರ ರೂಪಾಯಿ ಏರಿಸಲಾಗಿದೆ. ಹಾಗೆಯೇ ಗರಿಷ್ಠ ಪಿಂಚಣಿಗೂ ಮಿತಿಯನ್ನು ನಿಗದಿಪಡಿಸಲಾಗಿದೆ. ಅವಲಂಬಿತರ ನಿವೃತ್ತಿ ವೇತನವು 80,400 ರೂಪಾಯಿ ಮೀರುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕುಟುಂಬದ ಅವಲಂಬಿತರ ಗರಿಷ್ಠ ನಿವೃತ್ತಿ ವೇತನ 45,180 ರೂ.ಗಳಿದ್ದು 35,220 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಏಳನೇ ವೇತನ ಆಯೋಗವು ಶಿಫಾರಸು ಮಾಡಿದಂತೆ ನಿವೃತ್ತ ಸರ್ಕಾರಿ ನೌಕರರ ಪಿಂಚಣಿಯನ್ನು ಆರ್ಥಿಕ ಇಲಾಖೆ ಪರಿಷ್ಕರಣೆ ಮಾಡಿದೆ. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಹೆಚ್ಚಳವು 2022ರ ಜುಲೈ 1ರಿಂದ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ಈ ವರ್ಷದ ಆಗಸ್ಟ್ 1ರಿಂದ ಅನ್ವಯವಾಗುತ್ತದೆ ಎಂದು ಹಣಕಾಸು ಇಲಾಖೆಯ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ

Leave a Reply

Your email address will not be published. Required fields are marked *