ಗುವಾಹಟಿ: ಪ್ರತಿ ಶುಕ್ರವಾರದಂದು ನಮಾಜ್ ಮಾಡುವ ಸಲುವಾಗಿ ಸದನಕ್ಕೆ ವಿರಾಮ ನೀಡಲಾಗುತ್ತಿದ್ದ ಬ್ರಿಟಿಷ್ ಕಾಲದ ನಿಯಮವನ್ನು ಕೊನೆಗೊಳಿಸಲು ಅಸ್ಸಾಂ ವಿಧಾನಸಭೆ ಶುಕ್ರವಾರ ನಿರ್ಧರಿಸಿದೆ. ಅಂದರೆ ಇನ್ನು ಮುಂದೆ, ಮುಸ್ಲಿಂ ಶಾಸಕರಿಗೆ ಶುಕ್ರವಾರ ನಮಾಜ್ ಪ್ರಾರ್ಥನೆಗೆ ವಿರಾಮವಿರುವುದಿಲ್ಲ.
ಸದನದಲ್ಲಿ ಮಾತನಾಡಿದ ಸರುಪಥರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿಸ್ವಜಿತ್ ಫುಕನ್, “ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದ ಕಾಲದಿಂದಲೂ ಅಸ್ಸಾಂ ವಿಧಾನಸಭೆಯಲ್ಲಿ ಪ್ರತಿ ಶುಕ್ರವಾರ ನಮಾಜ್ ಮಾಡಲು ವಿರಾಮ ನೀಡಲಾಗುತ್ತಿತ್ತು. ಮಧ್ಯಾಹ್ನ 12 ರಿಂದ 2 ಗಂಟೆಯ ನಡುವೆ ಎರಡು ಗಂಟೆಗಳ ವಿರಾಮವಿತ್ತು. ಮುಸ್ಲಿಂ ಶಾಸಕರು ಪ್ರತಿ ಶುಕ್ರವಾರ ಈ ಸಮಯದಲ್ಲಿ ನಮಾಜ್ ಮಾಡುತ್ತಿದ್ದರು. ಆದರೆ, ಇಂದಿನಿಂದ ಈ ನಿಯಮವನ್ನು ಬದಲಾಯಿಸಲಾಗಿದೆ ಮತ್ತು ಇನ್ನು ಮುಂದೆ ಅಂಥ ಯಾವುದೇ ವಿರಾಮ ಇರುವುದಿಲ್ಲ.” ಎಂದು ಹೇಳಿದರು.
ಅಸ್ಸಾಂ ವಿಧಾನಸಭೆಯ ಸ್ಪೀಕರ್ ಬಿಸ್ವಜಿತ್ ಡೈಮರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಇದು ಸರ್ವಾನುಮತದ ನಿರ್ಧಾರವಾಗಿದ್ದು, ಇದಕ್ಕೆ ಇತರ ಶಾಸಕರ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.
ಈ ನಿರ್ಧಾರಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಲೋಕಸಭೆ, ರಾಜ್ಯಸಭೆ ಮತ್ತು ಇತರ ಯಾವುದೇ ರಾಜ್ಯಗಳಲ್ಲಿನ ವಿಧಾನಸಭಾ ಸದನಗಳಲ್ಲಿ ನಮಾಜ್ ಮಾಡಲು ವಿರಾಮ ನೀಡುವ ಪದ್ಧತಿಯಿಲ್ಲ. ಹೀಗಾಗಿ ಅಸ್ಸಾಂ ವಿಧಾನಸಭೆಯ ಸ್ಪೀಕರ್ ಕೂಡ ಬ್ರಿಟಿಷ್ ಯುಗದ ಈ ಪದ್ಧತಿಯನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ” ಎಂದು ಫುಕಾನ್ ಹೇಳಿದರು.
ಅಸ್ಸಾಂ ವಿಧಾನಸಭೆ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 9.30 ಕ್ಕೆ ಮತ್ತು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತಿತ್ತು. ಆದರೆ ಇದನ್ನು ಈಗ ಬದಲಾಯಿಸಲಾಗಿದ್ದು, ಇಂದಿನಿಂದ ವಿಧಾನಸಭೆಯು ಪ್ರತಿದಿನ ಬೆಳಿಗ್ಗೆ 9.30 ಕ್ಕೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.