ಚಿಕ್ಕಬಳ್ಳಾಪುರ: “ಟಾಲಿವುಡ್ ಸ್ಟಾರ್ ಚಿರಂಜೀವಿ ಅವರ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವುದು ನಿಜ. ಆದರೆ, ಅವರು ಈಗ ಅಭಿನಯಿಸುತ್ತಿರುವ ವಿಶ್ವಂಭರ ಚಿತ್ರದಲ್ಲಿ ಅಲ್ಲ. ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಯಾವ ಪಾತ್ರ ಏನೂ ಎನ್ನುವುದು ಗೊತ್ತಿಲ್ಲ. ನಾನು ಅವರ ದೊಡ್ಡ ಅಭಿಮಾನಿ. ಅವರ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕರೂ ಅದುವೇ ನನಗೆ ದೊಡ್ಡ ಸೌಭಾಗ್ಯ” ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಪ್ರದೀಪ್ ಈಶ್ವರ್ ಅವರಿಗೆ ಟಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿದೆ ಎನ್ನುವ ಚರ್ಚೆ ಹಿನ್ನೆಲೆ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
“ಹೌದು, ನನಗೆ ಟಾಲಿವುಡ್ನ ಸಿನೆಮಾದಲ್ಲಿ ಅಭಿನಯಿಸಲು ಆಫರ್ ಬಂದಿರೋದು ನಿಜ. ನಾನು ಮೆಗಾಸ್ಟಾರ್ ಚಿರಂಜೀವಿ ಅವರ ಫ್ಯಾನ್. ಚಿರಂಜೀವಿ ಜೊತೆ ನಟನೆ ಹಾಗೂ ಡ್ಯಾನ್ಸ್ ಮಾಡಬೇಕು ಎಂಬುದು ನನ್ನ ಆಸೆ. ಚಿರಂಜೀವಿ ಅವರ ಈಗಿನ ವಿಶ್ವಂಭರ ಚಿತ್ರದಲ್ಲಿ ನಟನೆ ಮಾಡುತ್ತಿಲ್ಲ. ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಯಾವ ಪಾತ್ರ ಕೊಟ್ಟರೂ ಮಾಡುತ್ತೇನೆ. ನಾನು ಚಿರಂಜೀವಿ ಹಾಗೂ ಅವರ ಕುಟುಂಬಕ್ಕೆ ತುಂಬಾ ಹತ್ತಿರದಲ್ಲಿ ಇದ್ದೇನೆ.” ಎಂದು ಹೇಳಿದರು.