ಬೆಂಗಳೂರು: ”ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದ್ದು, ಲೋಕಾಯುಕ್ತದವರು ಸ್ಪಷ್ಟೀಕರಣ ನೀಡಲಿದ್ದಾರೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಇದಾದ ನಂತರ, ಕ್ಲ್ಯಾರಿಫಿಕೇಶನ್ ಕೇಳಿ ವಾಪಸ್ ಕಳುಹಿಸಿದ್ದೇವೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ವಿಷಯ ರಿಜೆಕ್ಟ್ ಆಗುವುದಿಲ್ಲ. ರಾಜ್ಯಪಾಲರ ಬಳಿ ಇದ್ದಂತೆಯಲ್ಲವೇ?. ಇದನ್ನೇ ರಾಜ್ಯಪಾಲರು ನನ್ನ ಬಳಿ ದೂರುಗಳು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ” ಎಂದರು.
”ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಕ್ಲಾರಿಫಿಕೇಶನ್ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನಿರಲು ಬರುವುದಿಲ್ಲ. ಸ್ಪಷ್ಟೀಕರಣ ನೀಡಬೇಕಾಗುತ್ತದೆ. ತದನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು. ರಾಜ್ಯಪಾಲರು ಒಂದು ಕಡತ ಮಾತ್ರ ಇದೆ ಎಂಬುದನ್ನು ನಿನ್ನೆ ತಿಳಿಸಿದರು. ಹೆಚ್.ಡಿ.ಕುಮಾರಸ್ವಾಮಿಯವರದ್ದು ಎಂಬುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಕಾನೂನು ರೀತಿ ಇದೆಯೇ? ಕಾನೂನು ಬಾಹಿರವಾಗಿದೆಯೇ ಎಂಬುದನ್ನು ಲೋಕಾಯುಕ್ತದವರು ತಿಳಿಸಿದ್ದಾರೆ. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
”ಸಿದ್ದಾರ್ಥ ಟ್ರಸ್ಟ್‌ಗೆ ನೀಡಿರುವ ಕೆಐಎಡಿಬಿ ನಿವೇಶನದ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಆಗಿಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿಯವರ ಬಳಿ ಪ್ರಸ್ತಾಪ ಆಗಿಲ್ಲ. ಕೋರ್ಟ್ ತೀರ್ಪು ಆಧರಿಸಿ, ಮುಂದಿನ ಬೆಳವಣಿಗೆಗಳನ್ನು ನೋಡಿ ರಾಷ್ಟ್ರಪತಿ ಭೇಟಿಯ ಬಗ್ಗೆ ತೀರ್ಮಾನಿಸಲಾಗುವುದು” ಎಂದು ಪರಮೇಶ್ವರ್ ಹೇಳಿದರು.