ಬೆಂಗಳೂರು: ಬಿಬಿಎಂಪಿ ಈ ವರ್ಷ ಆಸ್ತಿತೆರಿಗೆ ಬಾಬ್ತಿನಡಿ 5,210 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಿ ದಾಖಲೆ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತವನ್ನು ಪಾಲಿಕೆ ವಸೂಲು ಮಾಡಿದ್ದು, ಈ ತಿಂಗಳಾಂತ್ಯಕ್ಕೆ 5,500 ಕೋಟಿ ರೂ. ತಲುಪುವ ಸಾಧ್ಯತೆ ಇದೆ.
ಪಾಲಿಕೆಯ ಎಂಟು ವಲಯಗಳ ಪೈಕಿ ಮಹದೇವಪುರದಲ್ಲಿ ಅತಿ ಹೆಚ್ಚು 1,414.16 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿ ಕ್ರಮವಾಗಿ 872.71 ಕೋಟಿ ರೂ. ಹಾಗೂ 716.22 ಕೋಟಿ ರೂ. ವಸೂಲು ಮಾಡಲಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ 187.34 ಕೋಟಿ ರೂ. ವಸೂಲಾಗಿದೆ.
ಈ ವರ್ಷ ಪಾಲಿಕೆಯಿಂದ ಆಸ್ತಿತೆರಿಗೆ ಸಂಬಂಧಿಸಿದ ಕೈಗೊಂಡ ಬಿಗಿ ನಿಲುವಿನಿಂದಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಸಂಗ್ರಹಿಸಲಾಗಿದೆ. ಕಂದಾಯ ವಿಭಾಗದಿಂದ ತೆರಿಗೆ ಸಂಗ್ರಹಕ್ಕೆ ಇದ್ದ ಕೆಲ ಕಾನೂನಾತ್ಮಕ ಅಡ್ಡಿಯನ್ನು ನಿವಾರಿಸಿಕೊಳ್ಳಲಾಯಿತು. ಎಲ್ಲ ವಲಯಗಳಲ್ಲೂ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸುವ ಜತೆಗೆ ಅಗತ್ಯ ಮಾರ್ಗದರ್ಶನವನ್ನು ನೀಡಿದ ಪರಿಣಾಮ ಕರ ವಸೂಲಿಗಾರರು ಹಿಂದಿಗಿಂತ ಹೆಚ್ಚು ಮೊತ್ತವನ್ನು ಸಂಗ್ರಹಿಸಲು ಶ್ರಮ ವಹಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
474 ಕೋಟಿ ರೂ. ಬಾಕಿ:
ಆಸ್ತಿತೆರಿಗೆಯನ್ನು ಬಹಳ ವರ್ಷಗಳಿಂದ ಪಾವತಿಸದೆ ಬಾಕಿ ಇರಿಸಿಕೊಂಡಿರುವ ಸ್ವತ್ತುದಾರರಿಗೆ ದಂಡ ಇಲ್ಲದೆ ಒಂದು ಬಾರಿ ಪಾವತಿಸುವ (ಒಟಿಎಸ್) ಅವಕಾಶವನ್ನು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಸರ್ಕಾರ ಗಡುವು ವಿಸ್ತಿರಿಸಿ ಈಗ ಸೆ.30ರವರೆಗೆ ಕಾಲಾವಕಾಶ ನೀಡಿದೆ. ಈ ಬಾಬ್ತಿನಡಿ 738 ಕೋಟಿ ರೂ. ಬಾಕಿ ಇದ್ದು, ಸೆ.1ರವರೆಗೆ 264 ಕೋಟಿ ರೂ. ವಸೂಲಾಗಿದೆ. ಇನ್ನೂ 474 ಕೋಟಿ ರೂ. (2.64 ಲಕ್ಷ ಸ್ವತ್ತು) ಮೊತ್ತವನ್ನು ಸುಸ್ತಿದಾರರು ಕಟ್ಟಬೇಕಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
4,600 ಸ್ವತ್ತುಗಳಿಗೆ ಬೀಗ:
ಪ್ರಸಕ್ತ ಸಾಲಿನವರೆಗೆ ಬಾಕಿ ಉಳಿಸಿಕೊಂಡಿರುವ ಆಸ್ತಿತೆರಿಗೆದಾರರಿಗೆ ಬಿಸಿ ಮುಟ್ಟಿಸಿರುವ ಪಾಲಿಕೆಯು, ಈವರೆಗೆ 4,600 ಸ್ವತ್ತುಗಳಿಗೆ ಬೀಗ ಹಾಕಿದೆ. ಅದೇ ರೀತಿ ಹೆಚ್ಚು ಮೊತ್ತ ಉಳಿಸಿಕೊಂಡಿರುವ 49,499 ಸ್ವತ್ತುಗಳನ್ನು ಕಂದಾಯ ಇಲಾಖೆಗೆ ಅಟ್ಯಾಚ್ ಮಾಡಲಾಗಿದೆ. ಈ ಪೈಕಿ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಿಗೆ ಸೇರಿದ ಅಧಿಕ ಸ್ವತ್ತುಗಳಿವೆ.
ವಲಯವಾರು ಆಸ್ತಿತೆರಿಗೆ ವಸೂಲು ವಿವರ:
ವಲಯದ ಹೆಸರು ಮೊತ್ತ (* ಕೋಟಿ ರೂ.ಗಳಲ್ಲಿ)
ಮಹದೇವಪುರ 1,414.16
ಪೂರ್ವ 872.71
ದಕ್ಷಿಣ 716.22
ಬೊಮ್ಮನಹಳ್ಳಿ 572.29
ಪಶ್ಚಿಮ 563.15
ಯಲಹಂಕ 490.04
ಆರ್.ಆರ್.ನಗರ 394.09
ದಾಸರಹಳ್ಳಿ 187.34
ಒಟ್ಟು ಮೊತ್ತ 5,210