ಸತತ 12 ಗಂಟೆ ಈಜಿದ ಬೆಳಗಾವಿಯ ತಾಯಿ – ಮಗ: ಏಷಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಹೆಸರು ಸೇರ್ಪಡೆ

12 ಗಂಟೆ ಈಜಿದ ತಾಯಿ-ಮಗ

12 ಗಂಟೆ ಈಜಿದ ತಾಯಿ-ಮಗ

ಬೆಳಗಾವಿ: ಹಾಡು, ನೃತ್ಯ, ಅಭಿನಯದಲ್ಲಿ ತಾಯಿ – ಮಗನ‌ ಜುಗಲ್ ಬಂಧಿ ನಾವು ನೀವೆಲ್ಲಾ ನೋಡಿದ್ದೇವೆ. ಆದರೆ, ಬೆಳಗಾವಿಯ ತಾಯಿ-ಮಗ ಸತತ 12 ಗಂಟೆ ಈಜುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ ಮಳೆಯ ನಡುವೆಯೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆಯಿಂದ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಹೌದು, ಬೆಳಗಾವಿ ಈಜು ಪಟುಗಳಾದ ಜ್ಯೋತಿ ಎಸ್ ಕೋರಿ ಮತ್ತು ಅವರ ಪುತ್ರ ವಿಹಾನ್ ಎಸ್. ಕೋರಿ ವಿನೂತನ ಸಾಧನೆ ಮೆರೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಬೆಳಗಾವಿಯ ಸುವರ್ಣ ಜೆಎನ್ಎಂಸಿಯ ಈಜುಕೋಳದಲ್ಲಿ ಸ್ವಿಮ್ಮರ್ಸ್ ಕ್ಲಬ್ ಆಫ್ ಬೆಲಗಾಮ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್ ಬೆಲಗಾಮ್ ವತಿಯಿಂದ ಲಾಂಗೆಸ್ಟ್ ನಾನ್ ಸ್ಟಾಪ್ ಸ್ವಿಮ್ಮಿಂಗ್ ರಿಲೇ ಏರ್ಪಡಿಸಲಾಗಿತ್ತು. ಬೆಳಗ್ಗೆ 5 ಗಂಟೆ 8 ನಿಮಿಷಕ್ಕೆ ಆರಂಭವಾದ ರಿಲೇ ಸತತ 12 ಗಂಟೆ 22‌ ನಿಮಿಷಗಳ ಕಾಲ ನಡೆಯಿತು. 5.30ಕ್ಕೆ ಈ ತಾಯಿ-ಮಗ ತಮ್ಮ ಯಶೋಗಾಥೆ ಪೂರ್ಣಗೊಳಿಸಿದರು. ವಿಹಾನ್ 18 ಕಿ.ಮೀ., ಜ್ಯೋತಿ 12 ಕಿ.ಮೀ. ಲೀಲಾಜಾಲವಾಗಿ ಈಜಿ ಸಂಭ್ರಮಿಸಿದರು.

ಬಳಿಕ ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರತಿನಿಧಿ ರೇಖಾ ಸಿಂಗ್ ಅವರು ಹೊಸ ಇತಿಹಾಸ ಬರೆದ ವಿಹಾನ್ ಮತ್ತು ಜ್ಯೋತಿ ಅವರಿಗೆ ಪದಕ ಪ್ರದಾನ ಮಾಡಿದರು. ಈಜುಪಟು ಜ್ಯೋತಿ ಕೋರಿ ಅವರು ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದ ತಂತ್ರಜ್ಞೆ ಆಗಿದ್ದು, ಪುತ್ರ ವಿಹಾನ್ ಸೆಂಟ್ ಕ್ಸೇವಿಯರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. ತಾಯಿ – ಮಗನ ಸಾಧನೆ ನೆರೆದಿದ್ದ ಜನರನ್ನು ಹುಬ್ಬೇರುವಂತೆ ಮಾಡಿತು. ಬೆಳಗ್ಗೆಯಿಂದ ಚಪ್ಪಾಳೆ ತಟ್ಟಿ ಇಬ್ಬರನ್ನೂ ಹುರಿದುಂಬಿಸಿದರು. ಇನ್ನು ಮಳೆಯ ನಡುವೆಯೂ ಛಲ ಬಿಡದೇ ತಮ್ಮ ಗುರಿ ತಲುಪಿ ಸಾಧನೆಯ ಶಿಖರವನ್ನು ಏರಿದರು.

Leave a Reply

Your email address will not be published. Required fields are marked *