CET – NEET: ನಾಳೆಯಿಂದ 2ನೇ ಸುತ್ತಿನ ಸೀಟು‌ ಹಂಚಿಕೆ ಆರಂಭ

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್​​ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆಪ್ಟೆಂಬರ್​ 8 ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಸೆ.​ 8ರಂದು ಬೆಳಗ್ಗೆ 11ಕ್ಕೆ ಹಂಚಿಕೆಗೆ ಲಭ್ಯ ಇರುವ ಸೀಟುಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2ರಿಂದ ಸೆ.11ರವರೆಗೆ ‘ಆಯ್ಕೆ’ (Options) ಗಳನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಮಟ್ಟದ ನೀಟ್ ಫಲಿತಾಂಶ ನೋಡಿಕೊಂಡು ಎರಡನೇ ಸುತ್ತಿನ ಫಲಿತಾಂಶದ ದಿನಾಂಕವನ್ನು‌ ನಂತರ ತಿಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ನೀಟ್​​ಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಈ ಹಂತದಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ, ಅಭ್ಯರ್ಥಿಗಳು ಇಷ್ಟ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು‌ ಎಂದು ಅವರು ಸಲಹೆ ನೀಡಿದ್ದಾರೆ.

ಯುಜಿ ಸಿಇಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು‌ ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳು ತಮಗೆ ಇಷ್ಟ ಇರುವ ಯಾವುದಾದರೊಂದು‌ ಛಾಯ್ಸ್ ಆಯ್ಕೆ‌ ಮಾಡಿಕೊಳ್ಳಬಹುದು. ಈ ಕುರಿತು ಸದ್ಯದಲ್ಲೇ ವಿವರಗಳನ್ನು ನೀಡಲಾಗುವುದು ಎಂದು‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *