ಭಾರತದಲ್ಲಿ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಮಾಡಲಾಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ 10, 20 ಮತ್ತು 50 ರೂಪಾಯಿ ನೋಟುಗಳ ಕೊರತೆ ಉಂಟಾಗಿದೆ.
ಈ ಬೆಳವಣಿಗೆ ಗಮನಿಸಿದ ಸಂಸದರೊಬ್ಬರು ರಿಸರ್ವ್ ಬ್ಯಾಂಕ್ ₹10,₹20 ಮತ್ತು ₹50 ಮುಖಬೆಲೆ ನೋಟುಗಳ ಮುದ್ರಣ ನಿಲ್ಲಿಸಿದೆಯಾ ಎಂದು ಪ್ರಶ್ನಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಮಾರುಕಟ್ಟೆಯಲ್ಲಿ ಕಡಿಮೆ ಮುಖಬೆಲೆಯ ನೋಟುಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಚಿಲ್ಲರೆ ಅಭಾವ ಉಂಟಾಗಿದೆ. ಕಾಂಗ್ರೆಸ್ ಸಂಸದ ಮಣಿಕಮ್ ಟ್ಯಾಗೋರ್, ನೋಟುಗಳ ಅಭಾವ ಸೃಷ್ಟಿಯಾಗಿದ್ದರ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಮಾರುಕಟ್ಟೆಯಲ್ಲಿ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸಬೇಕೆಂದು ಮಣಿಕಮ್ ಟ್ಯಾಗೋರ್ ಆಗ್ರಹಿಸಿದ್ದಾರೆ.
ಆರ್ಥಿಕ ವರ್ಷ 2023-24ರಲ್ಲಿ ಒಟ್ಟು ಕರೆನ್ಸಿಯಲ್ಲಿ 500 ರೂ. ನೋಟ್ಗಳು ಮೌಲ್ಯ ಮಾರ್ಚ್ 2024ರವರೆಗೆ ಶೇ.86.5ರಷ್ಟಿತ್ತು. ಮಾರ್ಚ್ 31, 2024 ರಂತೆ, ಗರಿಷ್ಠ ಸಂಖ್ಯೆಯ 500 ರೂ ನೋಟುಗಳು 5.16 ಲಕ್ಷದಲ್ಲಿ ಅಸ್ತಿತ್ವದಲ್ಲಿದ್ದರೆ, ರೂ 10 ನೋಟುಗಳು 2.49 ಲಕ್ಷ ಸಂಖ್ಯೆಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಪ್ರತಿ ಆರ್ಥಿಕ ವರ್ಷದಲ್ಲಿ ಕಡಿಮೆ ಮೌಲ್ಯದ ನೋಟುಗಳ ಕೊರತೆ ಮಾರುಕಟ್ಟೆಯಲ್ಲಿರುತ್ತದೆ. ಚಿಲ್ಲರೆ ಸಮಸ್ಯೆ ಬಗ್ಗೆ ಸಾರ್ವಜನಿಕರು ಯಾವಾಗಲೂ ಮಾತನಾಡುತ್ತಾರೆ. 2023-24ನೇ ಸಾಲಿನಲ್ಲಿ ಆರ್ಬಿಐ ನೋಟುಗಳ ಮುದ್ರಣಕ್ಕಾಗಿ 5,101 ಕೋಟಿ ರೂಪಾಯಿ ಖರ್ಚು ಮಾಡಿದೆ. 2022-23ನೇ ಸಾಲಿನಲ್ಲಿ ಆರ್ಬಿಐ ನೋಟುಗಳ ಮುದ್ರಣಕ್ಕಾಗಿ 4,682 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಮಣಿಕಮ್ ಟ್ಯಾಗೋರ್ ತಮಿಳುನಾಡಿನ ವಿರೂಧುನಗರ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. ಹಣಕಾಸು ಸಚಿವರೇ ಪ್ರಮುಖವಾದ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಲಕ್ಷಾಂತರ ಜನರು ವಿಶೇಷವಾಗಿ ಗ್ರಾಮೀಣ ಭಾಗದ ಮಾರುಕಟ್ಟೆಯಲ್ಲಿ ₹10,₹20 ಮತ್ತು ₹50 ಮುಖಬೆಲೆ ನೋಟುಗಳ ಕೊರತೆ ಅಧಿಕವಾಗುತ್ತಿದೆ. ಚಿಲ್ಲರೆ ಕೊರತೆಯಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಮಣಿಕಮ್ ಟ್ಯಾಗೋರ್ ಹೇಳಿದ್ದಾರೆ.
ಇದೇ ಪತ್ರದಲ್ಲಿ ಮಣಿಕಮ್ ಟ್ಯಾಗೋರ್, ಕೆಲ ವರದಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಕಡಿಮೆ ಮುಖಬೆಲೆ ನೋಟುಗಳ ಮುದ್ರಣ ನಿಲ್ಲಿಸಿ, ಯುಪಿಐ ಸೇರಿದಂತೆ ಡಿಜಿಟಲ್ ಪೇಮೆಂಟ್ ಹೆಚ್ಚಿಸಲು ಮುಂದಾಗಿದೆಯಂತೆ. ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವುದು ಎಷ್ಟು ಮುಖ್ಯ ಎಂಬುದರ ಬಗ್ಗೆಯೂ ಅರಿವು ಇದೆ. ಕಡಿಮೆ ಮುಖ ಬೆಲೆ ನೋಟುಗಳ ಕೊರತೆಯಿಂದ ಡಿಟಿಟಲ್ ಪೇಮೆಂಟ್ ಬಳಸದ ಜನರ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ
ಸರ್ಕಾರ ಕಡಿಮೆ ಮುಖಬೆಲೆ ನೋಟ್ಗಳ ಮುದ್ರಣ ನಿಲ್ಲಿಸುವ ಮೂಲಕ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಟ್ಯಾಗೋರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕಾರಣದಿಂದ ಸಣ್ಣ ವ್ಯವಹಾರಗಳು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ದಿನಗೂಲಿ ಕಾರ್ಮಿಕರು ಆರ್ಥಿಕ ಸಮಸ್ಯೆಗೆ ಸಿಲುಕುವಂತಾಗಿದೆ. ಸಣ್ಣ-ಪುಟ್ಟ ವ್ಯಾಪಾರದ ಮೇಲೆಯೂ ಚಿಲ್ಲರೆ ಅಭಾವ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಸಂಸದ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ರಿಸರ್ವ ಬ್ಯಾಂಕ್ ಕೂಡಲೇ ಕಡಿಮೆ ಮುಖಬೆಲೆ ನೋಟುಗಳ ಮುದ್ರಣ ಕಾರ್ಯ ಆರಂಭಿಸಲು ಸರ್ಕಾರ ಸೂಚನೆ ನೀಡಬೇಕು. ನೋಟುಗಳ ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸಬೇಕು. ಇದರ ಜೊತೆಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದ ಮುಖೇನ ಕೇಂದ್ರ ಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ.