ತುಮಕೂರು: ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದ ಪರಿಣಾಮದಿಂದಾಗಿ ಸುರಿದ ಭಾರೀ ಮಳೆ ತುಮಕೂರಿನಲ್ಲಿ ಸಾಕಷ್ಟು ಅವಾಂತರ ಸೃಷ್ಠಿಸಿತ್ತು. ಕಳೆದ ಸೋಮವಾರ ಆರಂಭವಾದ ಮಳೆರಾಯ ಬುಧವಾರದವರೆಗೂ ಸುರಿದು ಗುರುವಾರ ಮತ್ತು ಶುಕ್ರವಾರ ಬಿಡುವು ನೀಡಿತ್ತು. ಈಗ ಮತ್ತೆ ತುಂತುರು ಮಳೆ ಆರಂಭವಾಗಿದ್ದು, ಕಲ್ಪತರು ನಾಡು ಮಲೆನಾಡಿನಂತಾಗಿದೆ.
ಶುಕ್ರವಾರ ಇಡೀ ದಿನ ಬಿಸಿಲಿನ ವಾತಾವರಣ ಇತ್ತು. ಆದರೆ, ಶುಕ್ರವಾರ ರಾತ್ರಿಯಿಂದ ಇಡೀ ತುಮಕೂರಿನ ಹವಾಮಾನವೇ ಬದಲಾಗಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಉಷ್ಣಾಂಶ ಇಳಿಕೆಯಾಗಿದ್ದು, ತುಮಕೂರು ಊಟಿಯಂತಾಗಿದೆ.
ಸೋಮವಾರದಿಂದ ಬುಧವಾರದವರೆಗೂ ಸುರಿದ ಮಳೆಯಿಂದಾಗಿ ರಸ್ತೆಯ ಹೊಂಡ-ಗುಂಡಿಗಳು, ಅಂಡರ್ ಪಾಸ್ ಗಳು ನೀರಿನಿಂದ ತುಂಬಿ ವಾಹನ ಸವಾರರ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕಚೇರಿ ಸಿಬ್ಬಂದಿ, ನೌಕರರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಈ ಮಳೆಯು ಸಂಚಕಾರ ತಂದೊಡ್ಡಿತ್ತು.
ಈಗ ಮತ್ತೆ ಶನಿವಾರ ಬೆಳಿಗ್ಗೆ 5 ಗಂಟೆಯಿಂದಲೇ ಆರಂಭವಾಗಿರುವ ತುಂತುರು ಮಳೆ ಮಧ್ಯಾಹ್ನದ ವೇಳೆಗೆ ಬಿರುಸು ಪಡೆದುಕೊಂಡಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಜೋರು ಮಳೆ ಶುರುವಾಯಿತು. ಇದರಿಂದ ಶನಿವಾರ ಆಗಿದ್ದ ಕಾರಣ ಉದ್ಯೋಗಸ್ಥರು ಮನೆ ಸೇರಿಕೊಳ್ಳಲು ಪರದಾಡಿದರು. ಛತ್ರಿ ಆಶ್ರಯ ಪಡೆದುಕೊಂಡು ಬಸ್, ಆಟೋ ಹಿಡಿಯುತ್ತಿದ್ದ ದೃಶ್ಯ ಕಂಡುಬಂದಿತು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನೆನೆದುಕೊಂಡು ಮನೆ ಸೇರಿದ ದೃಶ್ಯವೂ ಕಂಡುಬಂದಿತು.
ಇದೇ ರೀತಿಯ ವಾತಾವರಣ ಅ.21ರವರೆಗೂ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನೂ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳೂ ಸೇರಿದಂತೆ ಹಲವೆಡೆ ಮಳೆಯ ಆರ್ಭಟ ಜೋರಾಗಿದೆ.