ಗುರುಗ್ರಾಮ್: ಸೈಬರ್ ಅಪರಾಧಕ್ಕಾಗಿ ಬ್ಯಾಂಕ್ ಖಾತೆ ತೆರೆಯಲು ಸೈಬರ್ ಕ್ರಿಮಿನಲ್ಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸರ್ಕಾರಿ ಬ್ಯಾಂಕಿನ ಓರ್ವ ಬ್ಯಾಂಕ್ ಅಧಿಕಾರಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಗುರುಗ್ರಾಮ್ ಪೊಲೀಸರ ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ರಾಜಸ್ಥಾನ ಮೂಲದ ಕನಿಷ್ಕ್ ವಿಜಯವರ್ಗಿಯ ಮತ್ತು ರಾಮ್ ಅವತಾರ್ ಎಂದು ಗುರುತಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಮ್) ಪ್ರಿಯಾಂಶು ದಿವಾನ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೆಸರಿನಲ್ಲಿ 24.6 ಲಕ್ಷ ರೂ.ಗಳನ್ನು ವಂಚನೆಯಾಗಿರುವ ಬಗ್ಗೆ ವ್ಯಕ್ತಿಯೊಬ್ಬರು ಜುಲೈ 2024 ರಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ, ಬೆಳಕಿಗೆ ಬಂದ ಅಂಶಗಳ ಆಧಾರದ ಮೇಲೆ, ಅಪರಾಧದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜಸ್ಥಾನದಲ್ಲಿ ಶಂಕಿತರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ರಾಮ್ ಅವತಾರ್ 2016 ರಿಂದ ರಾಜಸ್ಥಾನದ ಯುಕೋ ಬ್ಯಾಂಕ್ ಮಾನಸ ಸರೋವರ್ ಶಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಆರೋಪಿಗಳು ಬಹಿರಂಗಪಡಿಸಿದ್ದಾರೆ.
“ರಾಮ್ ಅವತಾರ್ ಮತ್ತು ಕನಿಷ್ಕ್ ಅವರು ನಕಲಿ ದಾಖಲೆಗಳ ಮೂಲಕ ಮೋಸದಿಂದ ಅಪರಾಧ ಕೃತ್ಯಕ್ಕಾಗಿ ಬಳಸಲಾದ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಅದೇ ಬ್ಯಾಂಕ್ ಖಾತೆಯನ್ನು ಆರೋಪಿಗಳು ಸೈಬರ್ ವಂಚನೆಗಾಗಿ ಇನ್ನೊಬ್ಬ ಆರೋಪಿಗೆ ಲಭ್ಯವಾಗುವಂತೆ ಮಾಡಿದ್ದಾರೆ” ಎಂದು ಗುರುಗ್ರಾಮ್ ಪೊಲೀಸ್ ವಕ್ತಾರ ಸಂದೀಪ್ ಕುಮಾರ್ ಹೇಳಿದ್ದಾರೆ.
ಆರೋಪಿಗಳು ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಪ್ರತಿ ಖಾತೆಗೆ 7,000 ರೂ.ಗಳನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ.