ಶಿಗ್ಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕೆ ಇಳಿಯಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚನ್ನಪಟ್ಟಣದ ಚುನಾವಣೆ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದ ಬಂಡಾಯದ ಬಿಸಿ ತಣ್ಣಗಾಗಿದೆ. ನವೆಂಬರ್ 13ರಂದು ನಡೆಯುವ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಅವರು ಸೋಮವಾರದಿಂದ ಚುನಾವಣಾ ಪ್ರಚಾರಕ್ಕೆಂದು ಅಖಾಡಕ್ಕೆ ಧುಮುಕಲಿದ್ದಾರೆ.
ಮಾಜಿ ಸಿಎಂ ಕ್ಷೇತ್ರದಿಂದಲೇ ಸಿಎಂ ಅಖಾಡಕ್ಕೆ ಎಂಟ್ರಿ!
ಮುಡಾ ಹಗರಣದ ತಲೆಬಿಸಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರು, ಇದೀಗ ಚುನಾವಣೆ ಇನ್ನೇನು 10 ದಿನಗಳು ಬಾಕಿ ಇರುವಾಗ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಅಬ್ಬರದ ಪ್ರಚಾರ ಆರಂಭಿಸಲು ಪ್ಲ್ಯಾನ್ ಮಾಡಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಮಾಜಿ ಸಿಎಂ ಕ್ಷೇತ್ರವಾಗಿರುವ ಶಿಗ್ಗಾವಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ಈ ಹಿಂದಿನಿಂದ ಸ್ಪರ್ಧೆ ಮಾಡುತ್ತಿದ್ದ ಶಿಗ್ಗಾವಿ ಕ್ಷೇತ್ರದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ. ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಪರ ಭರ್ಜರಿ ಕ್ಯಾಂಪೇನ್ ನಡೆಸಲಿದ್ದಾರೆ.
ಕ್ಷೇತ್ರದಲ್ಲಿನ ಬಂಡಾಯ ಶಮನ
ಮೂರು ಕ್ಷೇತ್ರ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಶಿಗ್ಗಾವಿಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ಬಂಡಾಯ ಅಭ್ಯರ್ಥಿಯ ಮನವಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಖಾದ್ರಿ ಎನ್ನುವ ಮುಸ್ಲಿ ಮುಖಂಡ ಬಂಡಾಯವೆದ್ದಿದ್ದರು, ಕೈ ನಾಯಕರೆಲ್ಲಾ ಸೇರಿ ಅವರಿಗೆ ಮುಂದಿನ ಸ್ಥಾನಮಾನಗಳ ಭರವಸೆ ನೀಡಿ, ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ.
ಅಹಿಂದ ಮತಬೇಟೆಯೇ ಸಿದ್ದು ಟಾರ್ಗೆಟ್!
ಕ್ಷೇತ್ರದಲ್ಲಿನ ಅಸಮಾಧಾನ ಶಮನ ಮಾಡಿದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ. ದಲಿತ, ಒಬಿಸಿ, ಅಲ್ಪಸಂಖ್ಯಾತ ಮತಗಳ ಕ್ರೂಡೀಕರಣಕ್ಕೆ ತಂತ್ರ ರೂಪಿಸಲಾಗಿದೆ. ಇದೀಗ ಸಿದ್ದರಾಮಯ್ಯ ಅವರು ಅಹಿಂದ ಮತಗಳನ್ನ ಬೇಟೆಯಾಡುವುದೇ ಸಿಎಂ ಸಿದ್ದರಾಮಯ್ಯ ಅವರ ಟಾರ್ಗೆಟ್ ಆಗಿದೆ. ಪ್ರಚಾರದ ವೇಳೆ ಕೇಂದ್ರದ ವಿರುದ್ಧ ಅಬ್ಬರಿಸುವ ಸಾಧ್ಯತೆ ಇದೆ. ನಿನ್ನೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಬಿಜೆಪಿ ವಿರುದ್ಧ ದಾಳಿ ನಡೆಸಿದ್ದರು. ಈ ಚುನಾವಣಾ ಪ್ರಚಾರದ ವೇಳೆಯೂ ಕೇಂದ್ರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ.
ಎರಡೂ ಕಡೆಯಿಂದ ಪ್ರಚಾರ ಕಣಕ್ಕೆ ರಂಗು
ಈ ಕ್ಷೇತ್ರದಲ್ಲಿ ಬಂಡಾಯ ಶಮನವಾಗಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಅಜ್ಜಂಪೀರ ಖಾದ್ರಿ ಮತ್ತು ಯಾಸೀರ ಖಾನ್ ಪಠಾಣ್, ಜಮೀರ್ ಅಹ್ಮದ್ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಇತ್ತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಸತತ ಗೆಲವು ಪಡೆದಿದ್ದ ಅನುಭವದ ಮೇಲೆ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ. ಭರತ್ ಬೊಮ್ಮಾಯಿ ತಾಯಿ ಚನ್ನಮ್ಮ ಕೂಡಾ ಮಹಿಳಾ ಮತದಾರನ್ನ ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.