ದಾವಣಗೆರೆ: ಹೃದಯಾಘಾತದಿಂದ ರಾಜ್ಯದಲ್ಲಿ ಸರಣಿ ಸಾವು ಮುಂದುವರಿದಿದ್ದು, ಇದಕ್ಕೆ ದಾವಣಗೆರೆ ಜಿಲ್ಲೆ ಕೂಡ ಹೊರತಾಗಿಲ್ಲ. ಕೇವಲ ಮೂರು ತಿಂಗಳಲ್ಲಿ ಹಠಾತ್ ಹೃದಯಾಘಾತದಿಂದ 16ರಿಂದ 18 ಹಾಗೂ ಇತರೆ ಹೃದಯ ಸಂಬಂಧಿ ಕಾಯಿಲೆಯಿಂದ 57 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಟಿ ರಾಘವನ್ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಯಾವುದೇ ಆತಂಕ ಬೇಡ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವಂತಹವರ ಸಂಖ್ಯೆ ಕಡಿಮೆ ಇದೆ. ಏಪ್ರಿಲ್ ತಿಂಗಳಲ್ಲಿ 22, ಮೇ ತಿಂಗಳಲ್ಲಿ 29 ಹಾಗೂ ಜೂನ್ ತಿಂಗಳಲ್ಲಿ 24 ಜನ ಸೇರಿ ಒಟ್ಟು 75 ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾಸ್ಪತ್ರೆ ಮತ್ತು ಇತರೆ ಆಸ್ಪತ್ರೆಯಿಂದ ತರಿಸಿಕೊಂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಖಾಸಗಿ ಆಸ್ಪತ್ರೆಗಳ ಅಂಕಿ-ಅಂಶ ದೊರೆಯಬೇಕಿದೆ. ಇದಲ್ಲದೆ ತಾಲೂಕು ಮಟ್ಟದಲ್ಲಿ ಕಳೆದ ವರ್ಷ (2024)ದಲ್ಲಿ 15, ಈ ವರ್ಷದ (2025) ಆರಂಭದಿಂದ ಈವರೆಗೆ 9 ಹೃದಯಾಘಾತದ ಪ್ರಕರಣಗಳು ಕಂಡು ಬಂದಿವೆ. ಮೂರು ತಿಂಗಳ ಈ ಅವಧಿಯಲ್ಲಿ 75 ಜನರ ಪೈಕಿ 16ರಿಂದ 18 ಜನರು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದರೆ, ವಿವಿಧ ಕಾಯಿಲೆಗೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಹೃದಯಾಘಾತವಾಗಿ 57 ಜನ ಮೃತಪಟ್ಟಿರುವುದು ವರದಿಯಿಂದ ತಿಳಿದು ಬಂದಿದೆ ಎಂದು ಡಾ. ರಾಘವನ್ ಮಾಹಿತಿ ನೀಡಿದರು.

ದೀರ್ಘಕಾಲಿಕ ರೋಗಳಾದ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಕ್ಯಾನ್ಸ್ರ್.. ಇವುಗಳಿಗೆ ಆರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ ಇರುತ್ತದೆ. ಒಂದು ಬಾರಿ ಡೈನೋಜ್ ಆದಲ್ಲಿ ಇವುಗಳಿಗೆ ಶಾಶ್ವತ ಪರಿಹಾರ ಇರುವುದಿಲ್ಲ. ಮನುಷ್ಯ ಎಲ್ಲಿಯವರೆಗೆ ಬದುಕಿರುತ್ತಾನೋ ಅಲ್ಲಿಯವರೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಇವುಗಳ ಬಗ್ಗೆ ಆಸ್ಪತ್ರೆಯಲ್ಲಿ ಯಾವುದೇ ಕಡ್ಡಾಯ ಮಾಹಿತಿ ಇರುವುದಿಲ್ಲ ಎಂದು ಡಾ. ರಾಘವನ್ ಹೇಳಿದರು.
ಎರಡು ಕಾರಣದಿಂದ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಉಂಟು. ಒಂದು ಅನುವಂಶೀತೆಯಿಂದ, ಇನ್ನೊಂದು ಬದಲಾದ ಜೀವನ ಶೈಲಿ ಮತ್ತು ಆಹಾರ ಕ್ರಮಗಳಿಂದ. ಉತ್ತಮ ಆಹಾರ ತೆಗೆದುಕೊಳ್ಳುವುದರ ಜೊತೆಗೆ ಅಷ್ಟೇ ವಿಶ್ರಾಂತಿ ಕೂಡ ಪಡೆಯಬೇಕು. ಒತ್ತಡದಲ್ಲಿ ಕೆಲಸ ಮಾಡಬಾರದು. ಹಾಗೆ ಮಾಡಿದಲ್ಲಿ ಹೃದಯಕ್ಕೆ ಒತ್ತಡ ಹಾಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನಿಗೂ ಹೃದಯ ಕಾಯಿಲೆ ಸೇರಿ ಸುಮಾರು 8ರಿಂದ 14 ದೀರ್ಘಕಾಲಿಕ ರೋಗಗಳಿಗೆ ಸಂಬಂಧಿಸಿದಂತೆ ಸರ್ವೇ ಶುರು ಮಾಡಲಾಗಿದೆ ಎಂದರು.
ಇದಕ್ಕಾಗಿ ಆಶಾ ಕರ್ಯಕರ್ತೆಯರು, ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ದೀರ್ಘಕಾಲಿಕ ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾರ್ವಜನಿಕರು ಇವರೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು. ಮಾಹಿತಿ ಹಂಚಿಕೊಂಡಲ್ಲಿ ಹೃದಯ ಸಂಬಂಧಿ ಕಾಯಿಲೆ ಪ್ರಾರಂಭಿಕ ಹಂತದಲ್ಲಿ ಕಂಡುಬಂದಲ್ಲಿ ತಡೆಯಬಹುದು. ಹೆಚ್ಚಾಗಿ ಯುವಕರು/ಯುವತಿಯರು ತಮ್ಮ ಆಹಾರ ಕ್ರಮ ಮತ್ತು ಜೀವನ ಶೈಲಿ ಇವೆರಡರ ಬಗ್ಗೆ ಗಮನ ನೀಡಬೇಕು. 30 ವರ್ಷ ಮೇಲ್ಪಟ್ಟವರು 6 ತಿಂಗಳಿಗೆ ಒಂದು ಸಾರಿ ಕಡ್ಡಾಯವಾಗಿ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒತ್ತಡ ನಿರ್ವಹಣೆಗೆ ಯೋಗ ಹಾಗೂ ಚಟುವಟಿಕೆಗಳನ್ನು ಅನುಸರಿಸಬೇಕು. ಇದರಿಂದ ಸಂಭವಿಸಬಹುದಾದ ಹೃದಯಾಘಾತವನ್ನು ತಡೆಗಟ್ಟಬಹುದು ಎಂದು ಡಾ. ರಾಘವನ್ ಹೇಳಿದರು.