39 ವರ್ಷಗಳ ಹಿಂದಿನ ಕೊಲೆ ಕೇಸ್ ಗೆ ಮರುಜೀವ : ತಪ್ಪು ಒಪ್ಪಿಕೊಂಡ ವ್ಯಕ್ತಿ

ತುಮಕೂರು || ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊ*ಗೈದ ಪತ್ನಿ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ.

ಕೇರಳ: 39 ವರ್ಷಗಳ ಹಿಂದೆ ಸಂಭವಿಸಿದ್ದ ಸಾವು ಮತ್ತು ಬಳಿಕ ಇದೊಂದು ಆಕಸ್ಮಿಕ ಘಟನೆ ಎಂದು ಅಂತ್ಯ ಕಂಡ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಇದಕ್ಕೆ ಕಾರಣ ವ್ಯಕ್ತಿಯೊಬ್ಬ ತಾನಾಗಿಯೇ ಪೊಲೀಸ್ ಠಾಣೆಗೆ ಶರಣಾಗಿ 39 ವರ್ಷಗಳ ಹಿಂದೆ ಮಾಡಿದ್ದ ಅಪರಾಧವನ್ನು ಒಪ್ಪಿಕೊಂಡಿರುವುದು.

ಏನಿದು ಪ್ರಕರಣ?: 1986ರಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದ ಯುವಕನ ಕೊಲೆ ತಾನೇ ಮಾಡಿರುವುದಾಗಿ ತಿಳಿಸಿ 54 ವರ್ಷದ ಮೊಹಮ್ಮದ್ ಅಲಿ ಎಂಬ ವ್ಯಕ್ತಿ ಕೇರಳದ ವೆಂಗಾರಾ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

1986ರಲ್ಲಿ ಯುವಕನೊಬ್ಬನ ಶವ ಕೋಯಿಕೋಡ್‌ ಜಿಲ್ಲೆಯ ಕೂಡರಂಜಿ ಅಂಗಡಿಯ ಕೆರೆಯಲ್ಲಿ ಪತ್ತೆಯಾಗಿತ್ತು. ಮೂರ್ಛೆ ರೋಗದ ಕಾರಣದಿಂದಲೇ ಈ ಯುವಕನ ಸಾವು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಆಗ ಪರಿಗಣಿಸಲಾಗಿತ್ತು. ಕೊಲೆ ತಪ್ಪೊಪ್ಪಿಕೊಂಡಿರುವ ಮೊಹಮ್ಮದ್ ಅಲಿ, ಈ ಘಟನೆಯ ವೇಳೆ 14 ವರ್ಷ ವಯಸ್ಸಿನವನಾಗಿದ್ದ.

ತನ್ನ ಕುಟುಂಬದಲ್ಲಿ ಇತ್ತೀಚಿಗೆ ಸಂಭವಿಸಿದ ಘಟನೆಗಳಿಂದ ನೊಂದಿರುವುದೇ ಮೊಹಮ್ಮದ್ ಅಲಿ ತಪ್ಪು ಒಪ್ಪಿಕೊಳ್ಳಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಮೊಹಮ್ಮದ್ ಅಲಿಯ ಓರ್ವ ಮಗ ಸಾವನ್ನಪ್ಪಿದ್ದು ಮತ್ತೊಬ್ಬ ಪುತ್ರ ಅಪಘಾತದಲ್ಲಿ ಗಾಯಗೊಂಡಿದ್ದ. ಕೊಲೆ ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವ ಮೊಹಮ್ಮದ್ ಅಲಿ ಘಟನೆ ನಡೆದ ನಿಖರವಾದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದು ತೋರಿಸಿದ್ದಾನೆ.

ಅಂದು ತಾನು ಕೂಡರಂಜಿಯ ದೇವಸಯ್ಯ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತೊಬ್ಬ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ. ಈ ವೇಳೆ ಭಯ ಮತ್ತು ಸಿಟ್ಟಿನಿಂದ ಆತನನ್ನು ನಾನು ಕೆರೆಗೆ ತಳ್ಳಿದ್ದಾಗಿ ಅಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಯುವಕನ ಶವ ಎರಡು ದಿನಗಳ ಬಳಿಕ ಕೆರೆಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಮೃತಪಟ್ಟ ಯುವಕನಿಗೆ ಮೂರ್ಛೆ ರೋಗವಿತ್ತು ಎಂದು ತಿಳಿಸಿದ ಕಾರಣ ಇದೊಂದು ಆಕಸ್ಮಿಕ ಘಟನೆಯೆಂದು ಪೊಲೀಸರು ಪ್ರಕರಣವನ್ನು ಕೊನೆಗೊಳಿಸಿದ್ದರು. ಅಲ್ಲದೇ ಯಾರೊಬ್ಬರು ಯುವಕನ ಗುರುತು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ ಮತ್ತು ಯಾರೂ ಸಂಬಂಧಿಗಳು ಬಾರದ ಕಾರಣ ಅಪರಿಚಿತ ಯುವಕನ ಶವವೆಂದು ಅಂತ್ಯಕ್ರಿಯೆ ನಡೆಸಲಾಗಿತ್ತು

ಇದೀಗ ಮೊಹಮ್ಮದ್ ಅಲಿ ತಪ್ಪೊಪ್ಪಿಗೆಯಿಂದಾಗಿ ವೆಂಗಾರ ಪೊಲೀಸರು ಘಟನೆ ನಡೆದ ತಿರುವಾಂಬ್ಡೆ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು, 1986ರ ಈ ಪ್ರಕರಣದ ಮರು ತನಿಖೆಗೆ ಕೈಗೆತ್ತಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *