ನವದೆಹಲಿ: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಮಗಳು- ಅಳಿಯ ಮನೆಗೆ ಬಂದಿದ್ದರಿಂದ ಮನೆಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ನಡೆದಿತ್ತು. ಮಾಂಸದ ಅಡುಗೆ ಊಟ ಮಾಡಿದ ನಂತರ ಅಳಿಯ ಫುಡ್ ಪಾಯ್ಸನ್ನಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಾನೇ ಮಾಡಿದ ಅಡುಗೆಯನ್ನು ತಿಂದ ಅತ್ತೆಯೂ ಮೃತಪಟ್ಟಿದ್ದಾರೆ. ಆ ಊಟ ಮಾಡಿದ ಮಗಳು, ಆಕೆಯ ಅಪ್ಪ ಸೇರಿದಂತೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಛತ್ತೀಸ್ಗಢದ ಕೊರ್ಬಾದಲ್ಲಿ ಚಿಕನ್ ಮಾಂಸ ತಿಂದ ತಕ್ಷಣ ಕುಟುಂಬದ ಎಲ್ಲರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ವಾಂತಿ ಮತ್ತು ಅತಿಸಾರದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅತ್ತೆ ಮತ್ತು ಅಳಿಯ ಸಾವನ್ನಪ್ಪಿದರು. ಕುಟುಂಬದ ಇತರ ಮೂವರು ಸದಸ್ಯರ ಸ್ಥಿತಿಯೂ ಗಂಭೀರವಾಗಿದೆ.
ರಾಜ್ಗಮರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರ್ಕೋಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಳಿಯ ಬಂದ ಮೇಲೆ ಮನೆಯಲ್ಲಿ ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ಚಿಕನ್ ಮತ್ತು ಮದ್ಯವನ್ನು ಬಡಿಸಲಾಗಿತ್ತು. ಆದರೆ ಈ ಪಾರ್ಟಿ ಎಲ್ಲರಿಗೂ ಸಾವು ಬದುಕಿನ ಪ್ರಶ್ನೆಯಾಗಿ ಮಾರ್ಪಟ್ಟಿತು. ತನಿಖೆಯಿಂದ ಇದು ಫುಡ್ ಪಾಯ್ಸನ್ ಪ್ರಕರಣ ಎಂದು ತಿಳಿದುಬಂದಿದೆ. ಪಾರ್ಟಿಯಲ್ಲಿ ಬಡಿಸಿದ ಮದ್ಯವೂ ವಿಷಕಾರಿಯಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ತನಿಖೆ ಪೂರ್ಣಗೊಂಡ ನಂತರವೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
60 ವರ್ಷದ ರಾಜ್ಮೀನ್ ಬಾಯಿ ಶಿವನಗರ ಚೌಹಾಣ್ ಪಾರಾದಲ್ಲಿ ವಾಸಿಸುತ್ತಿದ್ದರು. ರಾಜ್ಮೀನ್ ಬಾಯಿ ಅವರ ಅಳಿಯ ದೇವ್ ಸಿಂಗ್ ಗುರುವಾರ ರಾತ್ರಿ ತಮ್ಮ ಪತ್ನಿ ಚಮೇಲಿ ಜೊತೆ ಮಾವನ ಮನೆಗೆ ಬಂದಿದ್ದರು. ಅವರು ಭೈಷ್ಮಾ ದಾದರ್ ಕಲಾ ನಿವಾಸಿಯಾಗಿದ್ದರು. ಅವರಿಗೆ ಭರ್ಜರಿ ಔತಣ ನೀಡಲು ರಾಜ್ಮೀನ್ ಬಾಯಿ, ಆಕೆಯ ಗಂಡ, ಆಕೆಯ ಮಗ ರಾಜ್ಕುಮಾರ್ ಒಟ್ಟಿಗೆ ಚಿಕನ್ ಪಾರ್ಟಿ ಮಾಡಿದರು. ಊಟವಾದ ನಂತರ, ಮೊದಲು ರಾಜ್ಮೀನ್ ಬಾಯಿ ಅವರ ಆರೋಗ್ಯ ಹದಗೆಟ್ಟಿತು. ನಂತರ, ಅಳಿಯನ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆಯ ಸಮಯದಲ್ಲಿ ಇಬ್ಬರೂ ಸಾವನ್ನಪ್ಪಿದರು. ಉಳಿದವರ ಸ್ಥಿತಿ ಗಂಭೀರವಾಗಿದೆ.