ಜನಪ್ರಿಯ ಧಾರ್ಮಿಕ ಗುರು, ವಿಶ್ವ ಶಾಂತಿ ಪ್ರತಿಪಾದಕ ರವಿ ಶಂಕರ್ ಗುರೂಜಿ ಜೀವನ ಆಧರಿಸಿದ ಸಿನಿಮಾ ಒಂದು ಸೆಟ್ಟೇರಿದೆ. ಸಿನಿಮಾದ ಚಿತ್ರೀಕರಣ ಕೊಲಂಬಿಯಾನಲ್ಲಿ ಶುರುವಾಗಿದ್ದು, ತಮ್ಮ ಅತ್ಯುತ್ತಮ ನಟನೆಗಾಗಿ ಇತ್ತೀಚೆಗಷ್ಟೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟ ವಿಕ್ರಾಂತ್ ಮಾಸ್ಸಿ ಅವರು ರವಿ ಶಂಕರ್ ಗುರೂಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಭಾರತದಲ್ಲಿ ಮಾಫಿಯಾ ಡಾನ್ಗಳ ಬಗ್ಗೆ, ಅಪರಾಧ ಹಿನ್ನೆಲೆಯವರ ಬಗ್ಗೆ ಸಿನಿಮಾಗಳು ನಿರ್ಮಾಣ ಆಗುವುದು ಹೆಚ್ಚು. ಅದರಲ್ಲೂ ವಿಲನ್ಗಳನ್ನು ಹೀರೋಗಳ ರೀತಿಯಲ್ಲಿ ತೋರಿಸುವ ಸಿನಿಮಾಗಳು, ವೆಬ್ ಸರಣಿಗಳೇ ಹೆಚ್ಚು. ಅದನ್ನು ಹೊರತುಪಡಿಸಿದರೆ ಕ್ರೀಡಾ ತಾರೆಗಳ ಬಗ್ಗೆ ಹಾಗೂ ರಾಜಕಾರಣಿಗಳ ಜೀವನದ ಬಗ್ಗೆ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತವೆ. ಆದರೆ ಇದೀಗ ಧಾರ್ಮಿಕ ಗುರುಗಳ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ. ಹಲವಾರು ಭಕ್ತರನ್ನು ಹೊಂದಿರುವ ರವಿಶಂಕರ ಗುರೂಜಿ ಅವರ ಜೀವನ ಆಧರಿಸಿದ ಸಿನಿಮಾ ನಿರ್ಮಾಣ ಆಗುತ್ತಿದ್ದು ಚಿತ್ರೀಕರಣ ಶುರುವಾಗಿದೆ.
ರವಿಶಂಕರ ಗುರೂಜಿ ಜೀವನ ಆಧರಿಸಿದ ಸಿನಿಮಾನಲ್ಲಿ ಗುರೂಜಿ ಅವರ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ನಟಿಸಲಿದ್ದಾರೆ. ‘12 ಫೇಲ್’ ಸಿನಿಮಾದ ಅತ್ಯುತ್ತಮ ನಟನೆಗೆ ಇತ್ತೀಚೆಗಷ್ಟೆ ವಿಕ್ರಾಂತ್ ಮಾಸ್ಸಿಗೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ. ಅದ್ಭುತವಾದ ನಟರಾದ ವಿಕ್ರಾಂತ್, ಇದೇ ಮೊದಲ ಬಾರಿಗೆ ನಿಜ ವ್ಯಕ್ತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಗುರೂಜಿಯ ಜೀವನ ಆಧರಿಸಿದ ಸಿನಿಮಾಕ್ಕೆ ‘ವೈಟ್’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಚಿತ್ರೀಕರಣ ದಕ್ಷಿಣ ಅಮೆರಿಕದ ಕೊಲಂಬಿಯಾನಲ್ಲಿ ಶುರುವಾಗಿದೆ.
ಕೊಲಂಬಿಯಾನಲ್ಲಿ ನಡೆದ ನಾಗರೀಕ ಯುದ್ಧದ ಕತೆ ಹಾಗೂ ಅದನ್ನು ನಿವಾರಿಸುವಲ್ಲಿ ರವಿಶಂಕರ ಗುರೂಜಿ ವಹಿಸಿದ ಪಾತ್ರದ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಕೊಲಂಬಿಯಾ ಮಾತ್ರವೇ ಅಲ್ಲದೆ ವಿಶ್ವ ಶಾಂತಿಗೆ ರವಿಶಂಕರ ಗುರೂಜಿಯವರ ಇನ್ನಿತರೆ ಕೆಲವು ಪ್ರಯತ್ನಗಳ ಬಗ್ಗೆಯೂ ಈ ಸಿನಿಮಾ ಬೆಳಕು ಚೆಲ್ಲಲಿದೆ. ಸಿನಿಮಾ ಅನ್ನು ಮೊಂಟೊ ಬಾಸ್ಸಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸಿದ್ಧಾರ್ಥ್ ಆನಂದ್ ಮತ್ತು ಮಹಾವೀರ್ ಜೈನ್ ಬಂಡವಾಳ ತೊಡಗಿಸಿದ್ದಾರೆ. ಪೀಸ್ ಕ್ರಾಫ್ಟ್ ಪಿಕ್ಚರ್ಸ್ ವತಿಯಿಂದ ಸಿನಿಮಾದ ನಿರ್ಮಾಣ ಮಾಡಲಾಗುತ್ತಿದೆ.
ಕೊಲಂಬಿಯಾದ ನಿಜವಾದ ಲೊಕೇಶನ್ಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸ್ಥಳೀಯ ಜನಪ್ರಿಯ ಕಲಾವಿದರು ‘ವೈಟ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಕೊಲಂಬಿಯಾನಲ್ಲಿಯೇ ಚಿತ್ರೀಕರಣಗೊಂಡಿದ್ದ ಜನಪ್ರಿಯ ‘ನಾರ್ಕೋಸ್’ ವೆಬ್ ಸರಣಿಯ ನಟರುಗಳು, ತಂತ್ರಜ್ಞರು ಸಹ ಈ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. ಕೊಲಂಬಿಯಾನಲ್ಲಿ ನಡೆದ 52 ವರ್ಷಗಳ ಸುದೀರ್ಘ ಅಂತರ್ಯುದ್ಧವನ್ನು ಅಂತ್ಯಗೊಳಿಸುವಲ್ಲಿ ರವಿಶಂಕರ ಗುರೂಜಿ ಅನುಸರಿಸಿದ ಮಾರ್ಗಗಳು, ಮಾಡಿದ ಪ್ರಯತ್ನಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.
For More Updates Join our WhatsApp Group :