ವಿಷ್ಣು ಸಮಾಧಿ ಸ್ಥಳ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ: Sudeep

ವಿಷ್ಣು ಸಮಾಧಿ ಸ್ಥಳ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ: Sudeep

ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿರುವ ವಿಚಾರದ ಬಗ್ಗೆ ಕಿಚ್ಚ ಸುದೀಪ್, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಸಮಾಧಿ ಇದ್ದ ಸ್ಥಳವನ್ನು ಸಂಬಂಧಿಸಿದವರಿಂದ ಹಣ ಕೊಟ್ಟು ಖರೀದಿ ಮಾಡಿ ಅಭಿವೃದ್ಧಿಪಡಿಸಲು ಸಹ ರೆಡಿ ಎಂದಿದ್ದಾರೆ ಸುದೀಪ್.

ವಿಷ್ಣುವರ್ಧನ್ ಸಮಾಧಿ ಸ್ಥಳವನ್ನು ಧ್ವಂಸಗೊಳಿಸಿರುವುದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಹಲವಾರು ಸೆಲೆಬ್ರಿಟಿಗಳು ಸಹ ವಿಷ್ಣು ಸಮಾಧಿ ಧ್ವಂಸ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ಕಿಚ್ಚ ಸುದೀಪ್, ವಿಷ್ಣು ಸಮಾಧಿ ಧ್ವಂಸ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ, ನಿಗದಿತ ಸ್ಥಳವನ್ನು ಖರೀದಿ ಮಾಡಿ ಸ್ಮಾರಕ ನಿರ್ಮಿಸಲು ಸಹ ಸಿದ್ಧ ಎಂದಿದ್ದಾರೆ. ಸುದೀಪ್ ಬರೆದಿರುವ ಸುದೀರ್ಘ ಪತ್ರ ಯಥಾವತ್ ಇಲ್ಲಿದೆ…

‘‘ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ.

ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ.

ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ.

ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಪ್ರೀತಿಯ ಕಿಚ್ಚ’’

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *