‘ಸು ಫ್ರಮ್ ಸೋ’ ಚಿತ್ರ ಬಿಡುಗಡೆಯಾಗಿ 17 ದಿನ ಕಳೆದಿದೆ. ಈ ಅವಧಿಯಲ್ಲಿ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿದೆ. ಈ ಚಿತ್ರವು ದರ್ಶನ್ ನಟನೆಯ ಕಾಟೇರ ಚಿತ್ರದ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯುವತ್ತ ಸಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ‘ಸು ಫ್ರಮ್ ಸೋ’ ಚಿತ್ರವು ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
2023ರಲ್ಲಿ ರಿಲೀಸ್ ಆದ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಮಾಡಿದ ದಾಖಲೆ ತುಂಬಾನೇ ದೊಡ್ಡದು. ದರ್ಶನ್ ನಟನೆ, ಸಿನಿಮಾದ ಕಥೆ ಹಾಗೂ ನಿರೂಪಣೆ ಪ್ರೇಕ್ಷಕರಿಗೆ ಇಷ್ಟ ಆಯಿತು. ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿತ್ತು. ಈಗ ‘ಸು ಫ್ರಮ್ ಸೋ’ ಚಿತ್ರಕ್ಕೆ ಈ ದಾಖಲೆ ಮುರಿಯಲು ಬೇಕಿರೋದು ಕೇವಲ ಐದು ಕೋಟಿ ರೂಪಾಯಿ ಮಾತ್ರ ಅನ್ನೋದು ವಿಶೇಷ.
‘ಸು ಫ್ರಮ್ ಸೋ’ ಸಿನಿಮಾ ರಿಲೀಸ್ ಆಗಿ 17 ದಿನಗಳು ಕಳೆದಿವೆ. ಸಿನಿಮಾಗೆ ಯಾವುದೇ ಅಡೆತಡೆ ಇಲ್ಲದಿರುವುದು ಸಿನಿಮಾಗೆ ವರದಾನವಾಗಿದೆ. ಚಿತ್ರದಲ್ಲಿರುವ ಹಾಸ್ಯ ವಿಚಾರ, ಭಾವನಾತ್ಮಕ ವಿಷಯ ಎಲ್ಲರ ಮನಸ್ಸಿಗೆ ನಾಟಿದೆ. ಈ ಸಿನಿಮಾ ಈಗಾಗಲೇ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಕಲೆಕ್ಷನ್ ದಾಖಲೆ ಮುರಿದಿದೆ. ಮುಂದಿನ ದಿನಗಳಲ್ಲಿ ‘ಕಾಟೇರ’ ಕಲೆಕ್ಷನ್ ದಾಖಲೆಯನ್ನು ಕೂಡ ಮುರಿಯುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
‘ಕಾಟೇರ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂದು ಫ್ಯಾನ್ ಪೇಜ್ಗಳು ಹೇಳಿರಬಹುದು. ಆದರೆ, ಅಸಲಿಗೆ ಹಾಗಿಲ್ಲ. ಈ ಸಿನಿಮಾ ರಿಲೀಸ್ ಆಗಿ ಹಲವು ವಾರ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರದ ವಿಶ್ವ ಬಾಕ್ಸ್ ಆಫೀಸ್ ಗಳಿಕೆ 80 ಕೋಟಿ ರೂಪಾಯಿ ಎಂದು sacnilk ವರದಿ ಮಾಡಿದೆ. ಸದ್ಯ, ‘ಸು ಫ್ರಮ್ ಸೋ’ ಚಿತ್ರದ ನೆಟ್ ಕಲೆಕ್ಷನ್ 70 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಕೆಲವೇ ಕೋಟಿ ಗಳಿಸಿದರೆ ಸಿನಿಮಾ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿಯಲಿದೆ.
ಈ ವಾರ ‘ಕೂಲಿ’ ಹಾಗೂ ‘ವಾರ್ 2’ ಸಿನಿಮಾಗಳು ರಿಲೀಸ್ ಆಗಲಿವೆ. ಇದರಿಂದ ‘ಸು ಫ್ರಮ್ ಸೋ’ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಲಿದೆ ನಿಜ. ಆದರೆ, ಸಿನಿಮಾ ಒಂದು ಹಂತದಲ್ಲಿ ಕಲೆಕ್ಷನ್ ಮಾಡುತ್ತಾ ಸಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶದಲ್ಲಿ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬರುತ್ತಿದ್ದು, ಅದು ಮುಂದುವರಿಯಲಿದೆ. ಮಲಯಾಳಂ ಭಾಷೆಯಲ್ಲೂ ಸಿನಿಮಾ ಇಷ್ಟ ಆಗಿದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.
For More Updates Join our WhatsApp Group :