ನಮ್ಮ ಮೆಟ್ರೋ: ಅಪರ್ಣಾ ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಅವರ ಧ್ವನಿಯನ್ನು ಬಳಸಲಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಅಪರ್ಣಾ ಅವರು ತಮ್ಮ ಕೊನೆಯ ದಿನಗಳಲ್ಲಿಯೂ ಈ ರೆಕಾರ್ಡಿಂಗ್‌ಗೆ ಸಹಕರಿಸಿದ್ದರು
ನಟಿ, ನಿರೂಪಕಿ ಅಪರ್ಣಾ (Aparna) ಅವರು ಯಾವಾಗಲೂ ನೆನಪಿನಲ್ಲಿ ಇರುವ ವ್ಯಕ್ತಿ. ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅವರು ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದರು. ಅವರಿಗೆ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಮಧ್ಯೆಯೂ ಯೆಲ್ಲೋ ಲೈನ್ ಮೆಟ್ರೋಗೆ ಅವರು ಧ್ವನಿ ನೀಡಿದ್ದರು. ಹೀಗಾಗಿ, ಹಳದಿ ಮಾರ್ಗದಲ್ಲೂ ಈಗ ಅಪರ್ಣಾ ಧ್ವನಿ ಕೇಳಿಸುತ್ತಿದೆ ಅನ್ನೋದು ವಿಶೇಷ. ಇದನ್ನು ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಹಳದಿ ಬಣ್ಣದ ಮಾರ್ಗ ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.
ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆ್ಯಂಕರಿಂಗ್ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ಆ ಆಸೆ ಈಡೇರಿದೆ.