ತ್ರಿಪುರ: ಪೊಲೀಸ್ ಅಧಿಕಾರಿಯಾಗಿರುವ ತಂದೆಯೇ ಮಗಳಿಗೆ ವಿಷ ನೀಡಿದ್ದು ಅವರನ್ನು ನೇಣಿಗೆ ಹಾಕಿ ಎಂದು ತಾಯಿ ಒತ್ತಾಯಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ. ಅವರಿಗೆ ಹೆಣ್ಣು ಮಕ್ಕಳೆಂದರೆ ಇಷ್ಟ ಇರಲಿಲ್ಲ. ಅದಕ್ಕಾಗಿ ಅವರು ತಮ್ಮ ಎರಡನೇ ಮಗಳಿಗೆ ವಿಷ ಉಣಿಸಿದ್ದಾರೆ. ಬಿಸ್ಕತ್ತು ಕೊಡಿಸುವುದಾಗಿ ಮಗಳನ್ನು ಕರೆದುಕೊಂಡು ಹೋಗಿ ಆಕೆಗೆ ವಿಷ ಕೊಟ್ಟಿದ್ದಾರೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಪತ್ನಿ ಒತ್ತಾಯಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಎರಡನೇ ಬಾರಿಗೆ ಮಗಳು ಹುಟ್ಟಿದ್ದರಿಂದ ಅತೃಪ್ತನಾಗಿದ್ದ ತ್ರಿಪುರ ರಾಜ್ಯ ರೈಫಲ್ಸ್‌ನ ರತೀಂದ್ರ ದೇಬ್ಬರ್ಮಾ ಎಂಬಾತ ತಮ್ಮ ಮೂರು ವರ್ಷದ ಮಗಳಿಗೆ ವಿಷ ನೀಡಿದ್ದು, ಬಳಿಕ ಬಾಲಕಿ ಸಾವನ್ನಪ್ಪಿದ್ದಾಳೆ. ಆತ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆಟ್ಟದಾಗಿ ಅನೈತಿಕವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿರುವ ಪತ್ನಿ ಮಿತಾಲಿ ದೇಬ್ಬರ್ಮಾ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಧರ್ಮನಗರದ ಉತ್ತರ ತ್ರಿಪುರಾದ ಬೆಹಲಾ ಬಾರಿ ಪ್ರದೇಶದಲ್ಲಿ ಆಗಸ್ಟ್ 8 ರಂದು ತಡರಾತ್ರಿ ತ್ರಿಪುರ ರಾಜ್ಯ ರೈಫಲ್ಸ್‌ನ ರತೀಂದ್ರ ದೇಬ್ಬರ್ಮಾ ತಮ್ಮ ಮಗಳಿಗೆ ವಿಷ ಕೊಟ್ಟಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಮಗು ಸಾವನ್ನಪ್ಪಿದೆ.
ಎಡಿಸಿ ಖುಮುಲ್ವ್ಂಗ್ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತ್ರಿಪುರ ರಾಜ್ಯ ರೈಫಲ್ಸ್‌ನ ರತೀಂದ್ರ ದೇಬ್ಬರ್ಮಾ ಮಗಳಿಗೆ ಬಿಸ್ಕತ್ತು ಕೊಡಿಸುವುದಾಗಿ ಹೇಳಿ ಸಂಜೆ ವೇಳೆಗೆ ಅಂಗಡಿಗೆ ಕರೆದುಕೊಂಡು ಹೋಗಿದ್ದನು. ಹಿಂತಿರುಗುವಾಗ ತಾನು ಕೊಂಡೊಯ್ದಿದ್ದ ಬಾಟಲಿಯಲ್ಲಿದ್ದ ದ್ರವವನ್ನು ಕುಡಿಯಲು ಮಗುವಿಗೆ ಒತ್ತಾಯಿಸಿದ್ದಾನೆ. ಬಾಲಕಿ ಕುಡಿಯಲು ವಿರೋಧಿಸಿದಾಗ ಅವನು ಬಲವಂತವಾಗಿ ಕುಡಿಸಿದ್ದಾನೆ. ಬಳಿಕ ಮಗುವನ್ನು ಆತ ಮನೆಯಲ್ಲಿ ಬಿಟ್ಟು ಹೊರಟು ಹೋಗಿದ್ದಾನೆ. ಅಷ್ಟರಲ್ಲಿ ಮಗು ವಾಂತಿ ಮಾಡಲು ಪ್ರಾರಂಭಿಸಿತು. ಶಂಕೆಯಿಂದ ಈ ಕುರಿತು ಮಿತಾಲಿ ದೇಬ್ಬರ್ಮಾ ಗಂಡನನ್ನು ಕೇಳಿದಾಗ ಆತ ವಿಷ ಉಣಿಸಿರುವುದು ತಿಳಿದು ಬಂದಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಮಿತಾಲಿ ದೇಬ್ಬರ್ಮಾ, ಕೆಲವು ದಿನಗಳ ಹಿಂದೆ ನಾವು ನನ್ನ ಸಹೋದರಿಯ ಮನೆಗೆ ಹೋಗಿದ್ದೆವು. ಆಗ ಆತ ಮಗಳನ್ನು ಬಿಸ್ಕತ್ತು ತರಲು ಕರೆದುಕೊಂಡು ಹೋದನು. ನಾನು ಮನೆಗೆ ಹಿಂತಿರುಗಿದಾಗ ಅವಳು ವಾಂತಿ ಮಾಡಲು ಪ್ರಾರಂಭಿಸಿದ್ದಾಳೆ. ಕೂಡಲೇ ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ವೈದ್ಯರು ಅವಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನಮಗೆ ಗಂಡು ಮಗು ಇಲ್ಲದ ಕಾರಣ ಪತಿ ಅತೃಪ್ತರಾಗಿದ್ದನು. ಹೆಣ್ಣು ಮಗು ನಿಷ್ಪ್ರಯೋಜಕ ಎಂದು ಆತ ಹೇಳುತ್ತಿದ್ದ. ಮನೆಯಲ್ಲಿ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಕಾನೂನು ಕಠಿಣ ಕ್ರಮ ಕೈಗೊಂಡು ಆತನನ್ನು ಗಲ್ಲಿಗೇರಿಸಲಿ ಎಂದು ಮಿತಾಲಿ ತಿಳಿಸಿದ್ದಾರೆ.