ಮತ ಕಳ್ಳತನ ಆರೋಪ! ‘ಹೊಸ ಬಾಟಲಿಯಲ್ಲಿ ಹಳೆ ಮದ್ಯ’? ರಾಹುಲ್ ಗಾಂಧಿ ಮತ್ತೆ ವಿವಾದದಲ್ಲಿ | Political News

rahul gandi Allegations of vote theft

ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು EVM ಟ್ಯಾಂಪರಿಂಗ್ ಬಗ್ಗೆ ಆರೋಪ ಮಾಡುತ್ತಿರುವುದು ಹೊಸದೇನಲ್ಲ. 2014 ರಿಂದಲೂ ವಿದ್ಯುನ್ಮಾನ ಮತಯಂತ್ರದ ಕುರಿತಾದ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇವುಗಳಿಗೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿದ ಮೇಲೆ ಇದೀಗ ‘ಹೊಸ ಬಾಟಲಿಯಲ್ಲಿ ಹಳೆ ಮದ್ಯ’ ಎಂಬ ಗಾದೆ ಮಾತಿನಂತೆ ವಿನೂತನ ಆಯಾಮ ಮುಂದಿಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆ.

ಮಹಾರಾಷ್ಟ್ರ ಚುನಾವಣೆಯ ನಂತರ ‘ಮತ ಕಳ್ಳತನ’ ಹೆಸರಿನೊಂದಿಗೆ ರಾಹುಲ್ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದರು. ಬಿಹಾರ ವಿಚಾರದಲ್ಲೂ ಇದೇ ಆಯಿತು. ಯಾವಾಗ ರಾಹುಲ್ ಗಾಂಧಿ ಒಂದು ನಿರ್ದಿಷ್ಟ ಕ್ಷೇತ್ರದ ವಿಚಾರ ಮುಂದಿಟ್ಟುಕೊಂಡು ಅಂಕಿ ಅಂಶ ಸಹಿತ ಆರೋಪ ಮಾಡಿದರೋ, ಆವಾಗ ಮತ ಕಳ್ಳತನ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತ ಕಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದನಿಗೂಡಿಸಿದ್ದು, ಚರ್ಚೆಯನ್ನು ಕಾವೇರುವಂತೆ ಮಾಡಿತು.

ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಮಾತನಾಡುವ ಮುನ್ನ, ವ್ಯಕ್ತಿ ಒಬ್ಬ ಹೇಗೆ ಅದರಲ್ಲಿ ಸೇರ್ಪಡೆಯಾಗುತ್ತಾನೆ ಎಂಬ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ಅಗತ್ಯ. ಉದಾಹರಣೆಗೆ; ನಿಮ್ಮ ಹೆಸರಿನಲ್ಲಿ ಯಾವುದೇ ವಿಶ್ವಾಸಾರ್ಹ ದಾಖಲೆಗಳಿಲ್ಲ ಎಂದಿಟ್ಟುಕೊಳ್ಳೋಣ. ನೀವು ಬೆಂಗಳೂರಿನ ಮಹದೇವಪುರಕ್ಕೆ ಸ್ಥಳಾಂತರಗೊಳ್ಳುತ್ತೀರಿ. ನೀವು ಅಲ್ಲಿ ಒಂದು ಫ್ಲಾಟ್ ಅಥವಾ ಒಂದು ಬಿಎಚ್​​ಕೆ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತೀರಿ. ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳುತ್ತೀರಿ. ಇದಾದ ಮೂರು ತಿಂಗಳ ನಂತರ, ಕೇವಲ ಸಾಕ್ಷಿಯಾಗಿ ಒಬ್ಬರು ಸಹಿ ಮಾಡಿದ ಅಗ್ರಿಮೆಂಟ್ ಆಧಾರದ ಮೇಲೆ ನೀವು ಅಡುಗೆ ಅನಿಲ ಸಂಪರ್ಕಕ್ಕೆ ಅರ್ಹರಾಗುತ್ತೀರಿ.

ಬಾಡಿಗೆ ಒಪ್ಪಂದದ ಆಧಾರದ ಮೇಲೆ ನೀವು ಅಡುಗೆ ಅನಿಲ ಸಂಪರ್ಕಕ್ಕೆ ಅರ್ಹರಾಗುತ್ತೀರಿ. ಹೊಸ ಅನಿಲ ಸಂಪರ್ಕದೊಂದಿಗೆ, ನೀವು ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಮೂರು ತಿಂಗಳ ಎಲ್​ಪಿಜಿ, ವಿದ್ಯುತ್ ಅಥವಾ ದೂರವಾಣಿ ಸಂಪರ್ಕಗಳ ಯುಟಿಲಿಟಿ ಬಿಲ್‌ಗಳು ಯಾವುದು ಇದ್ದರೂ ಸಾಕು ಆಧಾರ್ ಪಡೆಯಲು

ಬೇರೆ ದೇಶಗಳ ಜನರು ಸೇರಿದಂತೆ ಇಲ್ಲಿ ವಾಸಿಸುವ ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಬಹುದು. ಒಮ್ಮೆ ನೀವು ಆಧಾರ್ ಹೊಂದಿದ್ದರೆ, ಮತದಾರರ ಪಟ್ಟಿಯಲ್ಲಿ ದಾಖಲಾಗುವುದು ಸುಲಭ.

ನಾನು ಬೆಂಗಳೂರಿನ ಹಳೆಯ ಪ್ರದೇಶವೊಂದರಲ್ಲಿ ವಾಸವಾಗಿದ್ದಾಗ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ಸಂಪರ್ಕಿಸಿ, ಮತದಾರರ ಪಟ್ಟಿಗೆ ಸೇರಿಸಲು ಸಹಾಯ ಮಾಡುವುದಾಗಿ ಹೇಳಿದ್ದರು. ಹಾಗಾದರೆ ವೋಟರ್ಸ್ ಲಿಸ್ಟ್​ಗೆ ಸೇರ್ಪಡೆ ಮಾಡುವಲ್ಲಿ ಅವರ ಪಾತ್ರವೇನು? ದಾಖಲೆಗಳ ಮುದ್ರಿತ ಪ್ರತಿಗಳನ್ನು ಸಂಗ್ರಹಿಸಿ, ಬೆಂಗಳೂರು ಕಾರ್ಪೊರೇಷನ್ ಕಚೇರಿಗೆ ಪದೇ ಪದೇ ಭೇಟಿ ನೀಡಿ, ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಹೆಸರು ದಾಖಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು. ಪಟ್ಟಿಯಲ್ಲಿ ಒಮ್ಮೆ ನಮ್ಮ ಹೆಸರು ದಾಖಲಾದ ನಂತರ, ಯಾವ ಪಕ್ಷದ ಕಾರ್ಯಕರ್ತರು ನಿಮಗೆ ನೆರವು ನೀಡಿದ್ದಾರೆ ಎಂಬುದು ಅಪ್ರಸ್ತುತವಾಗುತ್ತದೆ. ಮತದಾರರ ಪಟ್ಟಿಗೆ ಹೆಸರು ದಾಖಲಿಸಿ ಕೊಡುತ್ತೇನೆಂದು ಹಣ ತೆಗೆದುಕೊಂಡಿರುವ ಉದಾಹರಣೆಯನ್ನು ತಳ್ಳಿಹಾಕಲಾಗುವುದಿಲ್ಲ. ಅಂತ ಸಂದರ್ಭದಲ್ಲಿ, ಕಂಪ್ಯೂಟರ್​ ಸ್ವೀಕರಿಸುವ ರೀತಿಯಲ್ಲಿರುವ ಮಾಹಿತಿ ಹಾಕಿ, ದಾಖಲಿಸಿರುವ ಬಗ್ಗೆ ನಾವು ಕೇಳಿದ್ದೇವೆ.

ಹಾಗಾದರೆ, ಬಿಜೆಪಿ ಪ್ರಭಾವದಿಂದಾಗಿಯೇ ಪಟ್ಟಿಯಲ್ಲಿ ನಿರ್ದಿಷ್ಟ ಹೆಸರುಗಳು ಕಾಣಿಸಿಕೊಂಡಿವೆ ಎಂದು ರಾಹುಲ್ ಗಾಂಧಿ ಹೇಗೆ ಆರೋಪಿಸುತ್ತಾರೆ? ಯಾರಿಗಾದರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಸಹಾಯ ಮಾಡುವುದನ್ನು ‘ಮೃದು ಪ್ರಚಾರ (soft canvassing)’ ಎಂದು ಪರಿಗಣಿಸಬಹುದಾಗಿದ್ದರೂ, ಹೀಗೆ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದ ವ್ಯಕ್ತಿ-ಯಾವ ಪಕ್ಷದ ರ್ಯಕರ್ತರು ನೆರವಾಗಿದ್ದಾರೆಯೋ –ಅವರ ಪಕ್ಷದ ಪರವಾಗಿಯೇ ಮತ ಚಲಾಯಿಸುತ್ತಾರೆ ಎಂದು ಹೇಳಲು ಅಸಾಧ್ಯ.

ಈಗ ಮುಖ್ಯ ವಿಚಾರಕ್ಕೆ ಬರುವುದಾದರೆ, ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳು ಮತ್ತು ಲೋಪಗಳು ಹೊಸದೇನಲ್ಲ. 16-17 ವರ್ಷಗಳ ಹಿಂದೆಯೇ ಇಂತಹ ಅಸಂಗತತೆಗಳು ಕಂಡು ಬಂದಿವೆ ಎಂಬುದಾಗಿ ಜನಾಗ್ರಹ (ನಗರ ಅಧ್ಯಯನ ಎನ್​ಜಿಒ) ದ ದತ್ತಾಂಶಗಳನ್ನು ಉಲ್ಲೇಖಿಸಿ ರಾಜಕೀಯ ವಿಜ್ಞಾನಿ ಮತ್ತು ಸೆಫಾಲಜಿಸ್ಟ್ ಸಂದೀಪ್ ಶಾಸ್ತ್ರಿ ಇಂಗ್ಲಿಷ್ ದೈನಿಕವೊಂದರಲ್ಲಿ ಬರೆದ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ. ಅಂದರೆ, ಯುಪಿಎ ಆಡಳಿತಾವಧಿಯಲ್ಲಿಯೂ ಈ ತರದ ಲೋಪಗಳಿದ್ದವು. ಆದಾಗ್ಯೂ ನಿಖರ ಮತ್ತು ನಿರ್ದಿಷ್ಟ ರೂಪದಲ್ಲಿ ಮತದಾರರ ಪಟ್ಟಿಯನ್ನು ಹೊಂದುವ ಬಗ್ಗೆ ಸಾರ್ವಜನಿಕ ನಿರಾಸಕ್ತಿ ಮುಂದುವರೆದಿದೆ. ಜನರು ಹೆಚ್ಚು ಬಹು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು, ಸ್ಥಳಾಂತರಗೊಂಡ ನಂತರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ವಿಫಲರಾಗುವುದು ಮತ್ತು ಸಂಬಂಧಿಕರ ಸಾವಿನ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸದೇ ಇರುವುದು ನಡೆಯುತ್ತಲೇ ಇದೆ. ಇದು ಬಹಳ ಬೇಸರದ ಸಂಗತಿ.

ಮಹದೇವಪುರದಲ್ಲಿ ಹೊಸ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿತ್ತು ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಒಪ್ಪಿಕೊಂಡೆವು ಎಂದಿಟ್ಟುಕೊಳ್ಳೋಣ. ಅವರೆಲ್ಲರೂ ಚುನಾವಣೆಯಲ್ಲಿ ಬಿಜೆಪಿಗೇ ಮತ ಹಾಕಿದ್ದರು ಎಂದು ಊಹಿಸುವುದು ಹೇಗೆ ಸರಿಯಾಗುತ್ತದೆ? ಕೆಲವರು ಕಾಂಗ್ರೆಸ್‌ಗೆ ಮತ ಹಾಕಿರಲಾರರು ಎನ್ನುವುದು ಹೇಗೆ? ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ವಿಚಾರಕ್ಕೂ ಇದೇ ತರ್ಕ ಅನ್ವಯಿಸುತ್ತದೆ. ಅವು ಕಾಂಗ್ರೆಸ್ ಬೆಂಬಲಿಗರ ಮೇಲೆಯೇ ಪರಿಣಾಮ ಬೀರುತ್ತವೆ ಎಂದು ಖಚಿತವಾಗಿ ಹೇಳುವುದು ಹೇಗೆ? ಅದೇ ರೀತಿ, ಒಂದೇ ರೀತಿಯ ಫೋಟೋಗಳನ್ನು ಹೊಂದಿರುವ ಹೆಸರುಗಳು ಬಿಜೆಪಿಯ ತಂತ್ರದ್ದೇ ಭಾಗ ಎಂದು ಸಾಬೀತುಪಡಿಸುವುದು ಹೇಗೆ? ಈ ರೀತಿಯ ‘ನಕಲಿ ಮತದಾರರು’ ಬಿಜೆಪಿಗೆ ಮಾತ್ರ ಮತ ಹಾಕಿದ್ದಾರೆ ಎಂದು ನಿರೂಪಿಸುವುದು ಹೇಗೆ? ಅವರು ಕಾಂಗ್ರೆಸ್​ಗೂ ಮತ ಚಲಾಯಿಸಿರಬಹುದಲ್ಲವೇ?

ಕಾಂಗ್ರೆಸ್​ಗೆ 136 ಸೀಟು ಬಂದಾಗಲೂ ಸಿಇಒ ಆಗಿದ್ದ ಮೀನಾ!

ಏತನ್ಮಧ್ಯೆ, 2004 ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ವಿ. ಅನ್ಬುಕುಮಾರ್ ಕಳೆದ ತಿಂಗಳು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಆಗಿ ಅಧಿಕಾರ ವಹಿಸಿಕೊಂಡರು. ಮನೋಜ್ ಕುಮಾರ್ ಮೀನಾ ನಾಲ್ಕು ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. ಮೀನಾ ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (2023) ನಡೆದಿತ್ತು ಎಂಬುದು ಗಮನಿಸಬೇಕಾದ ವಿಚಾರ. ಈ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತು. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ-ಜೆಡಿ (ಎಸ್) ಮೈತ್ರಿಕೂಟ ಉಳಿದ 19 ಸ್ಥಾನಗಳನ್ನು ಪಡೆದುಕೊಂಡಿತು. ಮಹದೇವಪುರದಲ್ಲಿ ‘ಮತ ಕಳ್ಳತನ’ ನಡೆದಿದೆ ಮತ್ತು ಅದು ‘ಮುಚ್ಚಿಹಾಕಿದ ಪ್ರಕರಣ’ ಎಂಬ ರಾಹುಲ್ ಗಾಂಧಿಯವರ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಜವಾಗಿಯೂ ಒಪ್ಪಿಕೊಂಡಿದ್ದೇ ಹೌದಾದರೆ, ಮಾಜಿ ಸಿಇಒ ಮೀನಾ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಡೆಸಿಕೊಡುವಲ್ಲಿ ವಿಫಲರಾಗಿದ್ದಾರೆಂದು ಅವರು ಭಾವಿಸುತ್ತಾರೆಯೇ? ಮಹದೇವಪುರ ಪ್ರಕರಣವನ್ನು ತನಿಖೆ ಮಾಡುವಂತೆ ಗಾಂಧಿ ಈಗ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಮೀನಾ ಅವರನ್ನು ಈಗ ಸರ್ಕಾರವು ಅಕ್ರಮಗಳಿಗೆ ಹೊಣೆಗಾರರನ್ನಾಗಿ ಮಾಡಬಹುದೇ?

ಒಂದು ವೇಳೆ, ಮುಖ್ಯಮಂತ್ರಿ ಅಂತಹ ಕ್ರಮವನ್ನು ಅನುಸರಿಸಿದರೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಆ ಕ್ರಮವನ್ನು ಅನುಮೋದಿಸುತ್ತಾರೆಯೇ? ಐಎಎಸ್ ಅಧಿಕಾರಿಗಳ ಸಂಘದ ಕರ್ನಾಟಕ ವೃಂದವು ಹೇಗೆ ಪ್ರತಿಕ್ರಿಯಿಸುತ್ತದೆ? ಮೀನಾ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾದರೆ ಅವರು ಅದನ್ನು ಪ್ರಶ್ನಿಸಬಹುದೇ?

Leave a Reply

Your email address will not be published. Required fields are marked *