ತುಮಕೂರು: ಮೊಬೈಲ್ ಕದ್ದ ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಪ್ರದೀಪ್ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.
ಅಮಿತ್ ಹಾಗೂ ದಿಲೀಪ್ ಚೌಧರಿ ಎಂಬ ಇಬ್ಬರು ಯುವಕರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿ ಪ್ರದೀಪ್ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದನು. 2020ರಲ್ಲಿ ನಾಮದ ಚಿಲುಮೆ ಬಳಿ ಘಟನೆ ನಡೆದಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಪುನೀತ್ ವಿರುದ್ಧ ಐಪಿಸಿ 397 ಅಡಿ ದೂರು ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ಚನ್ನೇಗೌಡ ಕೋರ್ಟ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಆರ್.ಟಿ. ಅರುಣಾ ವಾದ ಮಂಡಿಸಿದ್ದರು. ನ್ಯಾಯಧೀಶ ಬಿ. ಜಯಂತ್ ಕುಮಾರ್ ಅವರು ಈ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಅಭಿಯೋಜಕಿ ಆರ್.ಟಿ. ಅರುಣಾ ಮಾತನಾಡಿ, “2020ರ ಡಿಸೆಂಬರ್ 28 ರಂದು ರಂದು ಘಟನೆ ನಡೆದಿತ್ತು. ಅಮಿತ್ ಹಾಗೂ ಆತನ ಸ್ನೇಹಿತ ದಿಲೀಪ್ ಆ ದಿನ ನಾಮದ ಚಿಲುಮೆಗೆ ಹೋಗಿದ್ದರು. ವಾಪಸ್ ಬರುವಂತಹ ಸಂದರ್ಭದಲ್ಲಿ ಒಂದು ಜಾಗದಲ್ಲಿ ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಆಗ ಕೆಟಿಎಂ ಬೈಕ್ನಲ್ಲಿ ಇಬ್ಬರು ಹುಡುಗರು ಬರುತ್ತಾರೆ. ಒಬ್ಬ ಪ್ರದೀಪ್, ಇನ್ನೊಬ್ಬ ಬಾಲಾಪರಾಧಿ. ಇಬ್ಬರು ಫೋಟೋ ತೆಗೆದುಕೊಳ್ಳುತ್ತಿದ್ದವರ ಬಳಿ ಹೋಗುತ್ತಾರೆ. ಫೋಟೋ ತೆಗೆಯುತ್ತಿರುವ ಮೊಬೈಲ್ ಕೊಡುವಂತೆ ಕೇಳುತ್ತಾರೆ. ಆಗ ಅಮಿತ್ ನನ್ನ ಮೊಬೈಲ್ಗೆ ರಿಚಾರ್ಜ್ ಮಾಡಿಲ್ಲ, ನನ್ನ ಸ್ನೇಹಿತನ ಮೊಬೈಲ್ ಕೊಡುತ್ತೇನೆ ಎಂದು ಹೇಳುತ್ತಾನೆ. ಆ ಮೊಬೈಲ್ ಬೇಡ ಓಪೋ ಹೊಸ ವರ್ಷನ್ ಮೊಬೈಲ್ ಬೇಕು ಎಂದು ಪ್ರದೀಪ್ ಹೇಳುತ್ತಾನೆ. ಇಬ್ಬರು ಮೊಬೈಲ್ ಕೊಡಲ್ಲ ಎಂದು ಪ್ರತಿರೋಧಿಸಿದ್ದಾರೆ.
ಆಗ ಪ್ರದೀಪ್ ಡ್ರ್ಯಾಗನ್ ತೋರಿಸಿ, ಆತನಿಂದ ಮೊಬೈಲ್ ಕಿತ್ತುಕೊಳ್ಳುತ್ತಾನೆ. ಅಮಿತ್ ಮನೆಗೆ ಹೋಗಿ ಮೊಬೈಲ್ ದರೋಡೆ ಮಾಡಿರುವ ಬಗ್ಗೆ ತನ್ನ ತಾಯಿಗೆ ತಿಳಿಸುತ್ತಾನೆ. ಅವನ ತಾಯಿ ದೂರು ದಾಖಲಿಸುತ್ತಾರೆ. ತನಿಖೆ ನಡೆದು, ಇನ್ಸ್ಪೆಕ್ಟರ್ ಚನ್ನೇಗೌಡ ಅವರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಾರೆ. ನ್ಯಾಯಾಲಯದಲ್ಲಿ 13 ಜನರನ್ನು ಸಾಕ್ಷಿ ವಿಚಾರಣೆ ಮಾಡಿದಾಗ, ಅಮಿತ್ ಹಾಗೂ ದಿಲೀಪ್ ಆರೋಪಿಯನ್ನು ಹಾಗೂ ಮೊಬೈಲ್ ಅನ್ನು ನಿಖರವಾಗಿ ಗುರುತು ಹಿಡಿಯುತ್ತಾರೆ. ಉಳಿದ ಸಾಕ್ಷಿಗಳು ಕೂಡ ಆರೋಪಿಯನ್ನು ಗುರುತಿಸುತ್ತಾರೆ. ಈ ಎಲ್ಲವನ್ನೂ ಪರಿಗಣಿಸಿ ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯದ ನ್ಯಾಯಧೀಶ ಬಿ. ಜಯಂತ್ ಕುಮಾರ್ ಅವರು ಆರೋಪಿ ಪ್ರದೀಪ್ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ” ಎಂದು ಹೇಳಿದರು.