ಸ್ಟಾರ್ ನಟರ ಜೊತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಿದೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆ. ‘ಟಾಕ್ಸಿಕ್’, ‘ಕೆಡಿ’, ‘ಜನ ನಾಯಗನ್’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಈ ಸಂಸ್ಥೆಯಿಂದ ಮೂಡಿಬರುತ್ತಿವೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ಬೆಳೆದುನಿಂತಿದೆ. ಇದೀಗ ತೆಲುಗು ಚಿತ್ರರಂಗಕ್ಕೂ ಈ ಸಂಸ್ಥೆ ಎಂಟ್ರಿ ಕೊಟ್ಟಿದೆ. ಮೆಗಾ ಸ್ಟಾರ್ ಚಿರಂಜೀವಿ ಜೊತೆ ಹೊಸ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಘೋಷಿಸಿದೆ.
ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ದೊಡ್ಡ ಹೆಸರು ಮಾಡಿದೆ. ಕನ್ನಡ, ತಮಿಳಿನಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಈ ನಿರ್ಮಾಣ ಸಂಸ್ಥೆ ಈಗ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ. ತೆಲುಗಿನಲ್ಲಿ ತಮ್ಮ ಮೊದಲ ಸಿನಿಮಾವನ್ನೇ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಮಾಡುತ್ತಿರುವುದು ವಿಶೇಷ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
ಕನ್ನಡದಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’, ‘ಕೆಡಿ’ ಸಿನಿಮಾಗಳನ್ನು ನಿರ್ಮಿಸುತ್ತಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ತಮಿಳಿನಲ್ಲಿ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆ ಮೂಲಕ ತಮಿಳು ಚಿತ್ರರಂಗದಲ್ಲೂ ಸಕ್ರಿಯವಾಗಿದೆ. ಅದೇ ರೀತಿ, ಇದೀಗ ಟಾಲಿವುಡ್ನತ್ತಲೂ ಮುಖ ಮಾಡಿರುವ ‘ಕೆವಿಎನ್’ ಸಂಸ್ಥೆಯು ಚಿರಂಜೀವಿ ಅವರ 158ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಆಗಸ್ಟ್ 22ರಂದು ‘ಮೆಗಾ ಸ್ಟಾರ್’ ಚಿರಂಜೀವಿ ಅವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಜೊತೆಗಿನ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಈ ಮೊದಲು ‘ವಾಲ್ತೇರು ವೀರಯ್ಯ’ ಸಿನಿಮಾವನ್ನು ಮಾಡಿದ್ದ ಬಾಬಿ ಕೊಲ್ಲಿ ಅವರು ಮತ್ತೊಮ್ಮೆ ಚಿರಂಜೀವಿಗೆ ನಿರ್ದೇಶನ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿ ಹಂತ ಹಂತವಾಗಿ ಸಿಗಲಿದೆ.
ಅಂದಹಾಗೆ ಚಿರಂಜೀವಿ, ಬಾಬಿ ಕೊಲ್ಲಿ, ಕೆವಿಎನ್ ಪ್ರೊಡಕ್ಷನ್ಸ್ ಕಾಂಬಿನೇಷನ್ನಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ದಸರಾ ಹಬ್ಬದ ಸಮಯದಲ್ಲಿ ಈ ಸಿನಿಮಾವನ್ನು ಲಾಂಚ್ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಚಿತ್ರೀಕರಣ ಶುರು ಆಗಲಿದೆ.
For More Updates Join our WhatsApp Group :