ಬೆಂಗಳೂರು: ಕೊಡಗು ಜಿಲ್ಲೆ ವಿರಾಜಪೇಟೆಯ ಕನ್ನಡ ಮಠ ಹಾಗೂ ಅದರ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಧಾರ್ಮಿಕ ಪೂಜಾ ವಿಧಾನಗಳು, ದಾಸೋಹ ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ತಸ್ತಿಕ್ ಹಣ ಮಂಜೂರು ಮಾಡಲು ನ್ಯಾಯಾಲಯ ಹೊರಡಿಸಿದ್ದ ಆದೇಶ ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ಸಂಬಂಧ ಕಂದಾಯ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ.ಮಹೇಶ್ ಸೇರಿ ಮತ್ತಿತರರಿಗೆ ಹೈಕೋರ್ಟ್ ಇಂದು ನೋಟಿಸ್ ಜಾರಿಗೊಳಿಸಿದೆ.
ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿಯ ಬೆಟ್ಟಗೇರಿ ಗ್ರಾಮದ ‘ಕನ್ನಡ ಮಠ’ದ ಪೀಠಾಧಿಪತಿ ಶ್ರೀ.ನಿ.ಪ್ರ.ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ, ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ಕೊಡುಗು ಜಿಲ್ಲಾಧಿಕಾರಿ ವೆಂಕಟರಾಜ ಹಾಗೂ ವಿರಾಜಪೇಟೆ ತಹಶೀಲ್ದಾರ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಕನ್ನಡ ಮಠ ಹಾಗೂ ಅದರ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ದೈನಂದಿನ ಧಾರ್ಮಿಕ ಪೂಜಾ ವಿಧಾನಗಳು, ದಾಸೋಹ ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ತಸ್ತಿಕ್ ಹಣ ಮಂಜೂರು ಮಾಡಲು ತಸ್ತಿಕ್ ಮೊತ್ತವನ್ನು ನೀಡಲು ನಿರ್ದೇಶನ ನೀಡುವಂತೆ ಕೋರಿ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ನ್ಯಾಯಪೀಠ, ಮಠಕ್ಕೆ ತಸ್ತಿಕ್ ಮೊತ್ತ ಪಾವತಿಸುವ ಬಗ್ಗೆ ಸ್ವಾಮೀಜಿಯವರು 2022ರ ಅಕ್ಟೋಬರ್ 7ರಂದು ನೀಡಿರುವ ಮನವಿ ಪರಿಗಣಿಸಿ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಮುಜರಾಯಿ ಆಯುಕ್ತರು ಹಾಗೂ ಕೊಡಗು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ 2023ರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು. ಅಲ್ಲದೇ ಆದೇಶ ಪಾಲಿಸಿದ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿತ್ತು. ಆದರೆ, ಈವರೆಗೆ ಈ ಆದೇಶ ಪಾಲಿಸಲಾಗಿಲ್ಲ ಎಂದು ದೂರಿ ಸ್ವಾಮೀಜಿ ಇದೀಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ