ದಾವಣಗೆರೆ : ಕೆಲ ದಿನಗಳ ಹಿಂದೆಯಷ್ಟೇ ಮಾರಕ ಕಫ್ ಸಿರಪ್ ಸೇವಿಸಿದ ಮಧ್ಯಪ್ರದೇಶ ಮತ್ತು ರಾಜಸ್ಥಾನದ 11 ಮಕ್ಕಳ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಮಹಾಮಾರಿ ಸಿರಪ್ ಈಗ ಬ್ಯಾನ್ ಆಗಿದೆ. ಆದರೆ ರಾಜ್ಯದಲ್ಲಿ ಇನ್ನೊಮ್ಮೆ ಸಿರಪ್ ಗದ್ದಲ ಕೇಳಿ ಬಂದಿದೆ. ದಾವಣಗೆರೆಯಲ್ಲಿ ಅಮಲು ಬರುವ ಸಿರಫ್ಗಳನ್ನು ಮಾರುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಸವನಗರ ಪೊಲೀಸರು ಬಂಧಿಸಿದ್ದು, 1.24 ಲಕ್ಷ ರೂ.ಮೌಲ್ಯದ ಸಿರಫ್ ವಶಪಡಿಸಿಕೊಂಡಿದ್ದಾರೆ.
ಅಮಲು ಬರುವ ಸಿರಪ್ನ ಅಕ್ರಮ ಮಾರಾಟ
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವೆಂದು ಶಂಕಿಸಲಾಗಿರುವ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ಕರ್ನಾಟಕ ರಾಜ್ಯದಲ್ಲೂ ನಿಷೇಧ ಮಾಡಲಾಗಿದೆ. ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಪತ್ರ ಬರೆಯುವ ಮೂಲಕ ರಾಜ್ಯದ ಎಲ್ಲಾ ಔಷಧಿ ಮಾರಾಟಗಾರರು ಹಾಗೂ ವಿತರಕರಿಗೆ ಮಾರಾಟ ಮಾಡದಂತೆ ಸೂಚನೆ ನೀಡಿದೆ. ಹೀಗಿರುವಾಗ ಮತ್ತೊಮ್ಮೆ ರಾಜ್ಯದಲ್ಲಿ ಅಕ್ರಮ ಸಿರಫ್ ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.
ದಾವಣಗೆರೆ ನಗರದ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಮಲು ಬರುವ ಸಿರಫ್ ಅನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ವೈದ್ಯರ ಸಲಹೆಯಿಲ್ಲದೇ, ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಯುವ ಸಮೂಹಕ್ಕೆ ಮತ್ತು ವ್ಯಸನಿಗಳಿಗೆ ಈ ಸಿರಫ್ ಮಾರಾಟ ಮಾಡುತ್ತಿದ್ದರು. ಈ ವೇಳೆ ದಾವಣಗೆರೆ ಎಸ್ಪಿ ಕಚೇರಿಯ ಮಾದಕ ದ್ರವ್ಯ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1.24 ಲಕ್ಷ ಮೌಲ್ಯದ ವಸ್ತುಗಳು ಪೊಲೀಸರ ವಶಕ್ಕೆ
ದಾವಣಗೆರೆ ಎಸ್ಪಿಎಸ್ ನಗರದ ಶಿವಕುಮಾರ (38), ಮಹಬೂಬ್ ನಗರದ ಅಜಿಮುದ್ದೀನ್ (37), ದೇವರಾಜ್ ಅರಸ ಬಡಾವಣೆಯ ಮಹಮದ್ ಶಾರೀಕ್ (35), ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು ಅಲಿಯಾಸ್ ಯೂನೂಸ್ (38), ಚನ್ನಗಿರಿ ಟೌನ್ ನಿವಾಸಿ ಅಬ್ದುಲ್ ಗಫರ್ ( 48) ಇವರೆಲ್ಲರೂ ಬಂಧಿತ ಆರೋಪಿಗಳು.
ಪೊಲೀಸರು ಆರೋಪಿಗಳಿಂದ 100 ಎಂ.ಎಲ್ ನ ಒಟ್ಟು 340 ಬ್ರಾಂಕೋಫ್-ಸಿ ಕೆಮ್ಮು ಸಿರಪ್ ಬಾಟಲ್‌ಗಳು, 100 ಎಂ.ಎಲ್ ನ 15 EDEX-CT ಕೆಮ್ಮು ಸಿರಪ್ ಬಾಟಲ್‌ಗಳು, 20 ಸಣ್ಣ ಬಾಕ್ಸ್ ಗಳಲ್ಲಿರುವ ಅಸೆಕ್ಲೋಫೆನಾಕ್ ಪ್ಯಾರೆಸಿಟಮಾಲ್ ಮತ್ತು ಸೆರಾಟಿಯೊಪೆಪ್ಟಿಡೇಸ್ ಮಾತ್ರೆಗಳು, ಒಂದು ಹೊಂಡಾ ಆಕ್ಟಿವಾ ಬೈಕು ಹಾಗೂ 1200 ನಗದನ್ನು ವಶಪಡಿಸಿಕೊಂಡಿದ್ದಾರೆ.
For More Updates Join our WhatsApp Group :
